ಬೆಂಗಳೂರು: 15ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಭ್ರಷ್ಟಾಚಾರದ ಆರೋಪಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಬಿಜೆಪಿಯಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವವರಿಗೆ ನನ್ನ ಹೆಸರು ಹೇಳುವುದು ಒಂದು ಆಸರೆಯಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಅವರು, ಬಿಜೆಪಿಯ ಮಾಜಿ ಶಾಸಕರೊಬ್ಬರು ಮಾಡಿರುವ ಆರೋಪಗಳನ್ನು “ತರ್ಕವಿಲ್ಲದ ಮತ್ತು ಸತ್ಯಾಂಶವಿಲ್ಲದ ಮಾತುಗಳು” ಎಂದು ತಳ್ಳಿಹಾಕಿದ್ದಾರೆ.
ಖರ್ಗೆ ನೀಡಿದ ಸ್ಪಷ್ಟನೆಗಳೇನು?
ಅನುದಾನ ಹಂಚಿಕೆ: 15ನೇ ಹಣಕಾಸು ಆಯೋಗದ ಅನುದಾನವನ್ನು ಶೇ. 90ರಷ್ಟು ಜನಸಂಖ್ಯೆ ಮತ್ತು ಶೇ. 10ರಷ್ಟು ಭೌಗೋಳಿಕ ವಿಸ್ತೀರ್ಣದ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಯಂತೆಯೇ ನಡೆಯುತ್ತಿದೆ.
ಗ್ರಾಮ ಪಂಚಾಯತಿಗಳ ಪಾತ್ರ: ಒಟ್ಟು ಅನುದಾನದಲ್ಲಿ ಶೇ. 60ರಷ್ಟು ನಿರ್ಬಂಧಿತ ಮತ್ತು ಶೇ. 40ರಷ್ಟು ಅನಿರ್ಬಂಧಿತ ಅನುದಾನವಿರುತ್ತದೆ. ಗ್ರಾಮ ಪಂಚಾಯತಿಗಳು ಗ್ರಾಮ ಸಭೆಗಳನ್ನು ನಡೆಸಿ, ತಾವೇ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತವೆ.
ಪಾರದರ್ಶಕತೆ: ಕ್ರಿಯಾಯೋಜನೆ ಮತ್ತು ಅನುಷ್ಠಾನದ ಎಲ್ಲ ಮಾಹಿತಿಯನ್ನು ‘ಇ-ಗ್ರಾಮ ಸ್ವರಾಜ್’ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಇದಕ್ಕೆ ಸರ್ಕಾರದ ಪ್ರತ್ಯೇಕ ಅನುಮೋದನೆಯ ಅಗತ್ಯವಿರುವುದಿಲ್ಲ. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಆಶಯದಂತೆ ಸ್ಥಳೀಯ ಸಂಸ್ಥೆಗಳಿಗೆ ಈ ಅಧಿಕಾರ ನೀಡಲಾಗಿದೆ.
“ಬಿಜೆಪಿ ಕಚೇರಿಯ ಮೂಲೆಯಲ್ಲಿ ಗುಜರಿ ತೂಕಕ್ಕೆ ಹಾಕಲು ಇಟ್ಟಿದ್ದ ಯಾವುದೋ ಪೇಪರ್ ಬಂಡಲ್ ಹಿಡಿದುಕೊಂಡು ಆರೋಪ ಮಾಡುತ್ತಿದ್ದಾರೆ. ಗುಡ್ಡ ಅಗೆಯುವವರಿಗೆ ಇಲಿಯನ್ನಾದರೂ ಹಿಡಿಯುವ ಗುರಿ ಇರಬೇಕು, ಆದರೆ ಇವರಿಗೆ ಜಿರಳೆ ಹಿಡಿಯಲೂ ಸಾಧ್ಯವಾಗಲಿಲ್ಲ” ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ತಮ್ಮ ವಿರುದ್ಧದ ಆರೋಪಗಳು ಕೇವಲ ರಾಜಕೀಯ ಪ್ರೇರಿತ ಮತ್ತು ಬಿಜೆಪಿಯ ಹತಾಶೆಯ ಪ್ರತೀಕ ಎಂದು ಅವರು ಕಿಡಿಕಾರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


