ಬೆಂಗಳೂರಿನಲ್ಲಿ ಜನವರಿ 28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆಯನ್ನು ಕರೆಯಲಾಗಿದ್ದು, ಎಲ್ಲ ಶಾಸಕರು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ. ಅರಮನೆ ರಸ್ತೆಯ ಸಿಐಡಿ ಕಚೇರಿ ಸಮೀಪವಿರುವ ಹೋಟೆಲ್ ರಾಡಿಸನ್ ಬ್ಲೂನಲ್ಲಿ ಅಂದು ಸಂಜೆ 6:30ಕ್ಕೆ ಈ ಸಭೆ ಆಯೋಜನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.
ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಸಭೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ. ವಿಶೇಷವಾಗಿ ಅಧಿವೇಶನದ ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರ ಸಿದ್ಧಪಡಿಸಿದ್ದ ಭಾಷಣದ ಬದಲು ಕೇವಲ ಎರಡು ನಿಮಿಷಗಳ ಕಾಲ ತಮ್ಮದೇ ಭಾಷಣ ಓದಿ ನಿರ್ಗಮಿಸಿರುವುದು ಆಡಳಿತ ಪಕ್ಷದ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸದನದಲ್ಲಿ ಯಾವ ರೀತಿ ಪ್ರತಿಭಟನೆ ನಡೆಸಬೇಕು ಮತ್ತು ವಿರೋಧ ಪಕ್ಷಗಳ ಟೀಕೆಗಳಿಗೆ ಹೇಗೆ ಪ್ರತ್ಯುತ್ತರ ನೀಡಬೇಕು ಎಂಬ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ.
ಜನವರಿ 31ರವರೆಗೆ ಅಧಿವೇಶನ ನಡೆಯಲಿದ್ದು, ಈ ಅವಧಿಯಲ್ಲಿ ಶಾಸಕರು ಸದನದಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಮಾರ್ಗದರ್ಶನ ನೀಡಲಿದ್ದಾರೆ. ರಾಜ್ಯಪಾಲರ ನಡವಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, ಇದನ್ನು ಒಕ್ಕೂಟ ವ್ಯವಸ್ಥೆಗೆ ಎಸಗಿದ ಅಪಮಾನ ಎಂದು ಕರೆದಿದ್ದು, ಈ ಕುರಿತು ಶಾಸಕರಲ್ಲಿ ಒಗ್ಗಟ್ಟು ಮೂಡಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


