ತಿಪಟೂರು: ರಾಜ್ಯಪಾಲರು ಕರ್ನಾಟಕ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ನಿರಾಕರಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ಗಂಭೀರ ದಾಳಿ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ಟೂಡಾ ಅವರು ತೀವ್ರವಾಗಿ ಖಂಡಿಸಿದರು.
ತಿಪಟೂರು ನಗರಸಭೆ ವೃತ್ತದ ಎದುರು ಯಾವುದೇ ಪಕ್ಷದ ಧ್ವಜ, ವೇದಿಕೆ ಅಥವಾ ಮೈಕ್ ಇಲ್ಲದೆ, ಒಬ್ಬರೇ ಭಿತ್ತಿ ಪತ್ರ ಹಿಡಿದು ನಡೆಸಿದ ಏಕವ್ಯಕ್ತಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು“ನಾನು ಇಂದು ಇಲ್ಲಿ ಒಬ್ಬನೇ ನಿಂತಿದ್ದೇನೆ. ಆದರೆ ನನ್ನ ಹಿಂದೆ ಕರ್ನಾಟಕದ ಜನತೆಯ ಧ್ವನಿ ಇದೆ. ಇದು ಯಾವುದೇ ವ್ಯಕ್ತಿಯ ವಿರುದ್ಧದ ಹೋರಾಟವಲ್ಲ, ಯಾವುದೇ ಹುದ್ದೆಯ ವಿರುದ್ಧದ ಆಕ್ರೋಶವಲ್ಲ. ಇದು ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಆಕ್ರಮಣದ ವಿರುದ್ಧದ ಹೋರಾಟ” ಎಂದು ಹೇಳಿದರು.
ರಾಜ್ಯಪಾಲರು ವಿಧಾನಸಭೆಯಲ್ಲಿ ಮಾತನಾಡಲು ನಿರಾಕರಿಸಿರುವುದು ಸಣ್ಣ ಅಥವಾ ತಾಂತ್ರಿಕ ವಿಚಾರವಲ್ಲ. ಅದು ಜನರಿಂದ ಆಯ್ಕೆಯಾದ ಸರ್ಕಾರದ ಧ್ವನಿಯನ್ನು ಮೌನಗೊಳಿಸುವ ಪ್ರಯತ್ನವಾಗಿದೆ. ಇದು ವಿಧಾನಸಭೆಯ ಗೌರವವನ್ನು ತುಳಿಯುವ ನಡೆ ಮತ್ತು ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ಎಂದು ಸಿಬಿ ಶಶಿಧರ್ ಕಿಡಿಕಾರಿದರು.
“ರಾಜ್ಯಪಾಲರು ಮಾತನಾಡುವುದು ಅವರ ಆಯ್ಕೆಯಲ್ಲ. ಅದು ಅವರ ಸಂವಿಧಾನಾತ್ಮಕ ಕರ್ತವ್ಯ. ಆ ಕರ್ತವ್ಯವನ್ನು ನಿರಾಕರಿಸುವ ಹಕ್ಕು ಯಾರಿಗೂ ಇಲ್ಲ. ಈ ಸರ್ಕಾರವನ್ನು ದಿಲ್ಲಿ ನೇಮಿಸಿಲ್ಲ, ರಾಜಭವನ ನೇಮಿಸಿಲ್ಲ. ಈ ಸರ್ಕಾರವನ್ನು ಕನ್ನಡಿಗರು ತಮ್ಮ ಮತದ ಮೂಲಕ ಆಯ್ಕೆ ಮಾಡಿದ್ದಾರೆ. ಕೋಟ್ಯಾಂತರ ಜನರ ಮತದಿಂದ ಬಂದ ಸರ್ಕಾರದ ಮಾತನ್ನು ಒಂದು ಹುದ್ದೆ ತಳ್ಳಿಹಾಕಿದರೆ, ಅದು ಸರ್ಕಾರದ ಅವಮಾನವಲ್ಲ — ಜನತೆಯ ಅವಮಾನ” ಎಂದು ಅವರು ಹೇಳಿದರು.
ಇಂದು ಮಾತನಾಡಲು ನಿರಾಕರಿಸಿದವರು ನಾಳೆ ಸರ್ಕಾರದ ತೀರ್ಮಾನಗಳಿಗೆ ಅಡ್ಡಿ ಮಾಡಬಹುದು, ಮುಂದಿನ ದಿನಗಳಲ್ಲಿ ವಿಧಾನಸಭೆಯನ್ನೇ ಅರ್ಥಹೀನಗೊಳಿಸುವ ಅಪಾಯಕಾರಿ ದಾರಿಯಿದು. ಇದು ಪ್ರಜಾಪ್ರಭುತ್ವವನ್ನು ನಿಧಾನವಾಗಿ ಕೊಲ್ಲುವ ದಾರಿ ಎಂದು ಎಚ್ಚರಿಸಿದರು.
“ನಾನು ಇಲ್ಲಿ ನಿಂತಿರುವುದು ಗಲಾಟೆ ಮಾಡಲು ಅಲ್ಲ, ಯಾರನ್ನೂ ಕೆರಳಿಸಲು ಅಲ್ಲ. ಎಚ್ಚರಿಕೆ ನೀಡಲು. ನಾವು ಮೌನವಾಗಿದ್ದರೆ ಇದು ರೂಢಿಯಾಗುತ್ತದೆ. ನಾವು ಒಪ್ಪಿಕೊಂಡರೆ ಇದು ಕಾನೂನಾಗುತ್ತದೆ. ನಾನು ಒಬ್ಬನೇ ನಿಂತಿದ್ದೇನೆ ಅನ್ನಬಹುದು, ಆದರೆ ನನ್ನ ಜೊತೆ ಮತ ಹಾಕಿದ ರೈತ ಇದ್ದಾನೆ, ತೆರಿಗೆ ಕೊಡುವ ಕಾರ್ಮಿಕ ಇದ್ದಾನೆ, ಭವಿಷ್ಯ ಕನಸು ಕಟ್ಟಿದ ಯುವಕ ಇದ್ದಾನೆ, ಗೌರವದ ಬದುಕು ಬಯಸುವ ಮಹಿಳೆ ಇದ್ದಾಳೆ. ಇದು ಅವರ ಧ್ವನಿ” ಎಂದು ಹೇಳಿದರು.
ರಾಜ್ಯಪಾಲರ ಹುದ್ದೆಗೆ ಅವಮಾನ ಮಾಡುವ ಉದ್ದೇಶ ನನಗಿಲ್ಲ. ಆದರೆ ಸಂವಿಧಾನ ಮೀರಿದ ನಡೆ. ಯಾರಿಂದ ಬಂದರೂ ಅದು ತಪ್ಪೇ. ಇದು ಪಕ್ಷ ರಾಜಕಾರಣದ ಪ್ರಶ್ನೆಯಲ್ಲ, ಅಧಿಕಾರದ ಪ್ರಶ್ನೆಯಲ್ಲ. ಇದು ನಮ್ಮ ಹಕ್ಕಿನ ಪ್ರಶ್ನೆ, ನಮ್ಮ ಪ್ರಜಾಪ್ರಭುತ್ವದ ಪ್ರಶ್ನೆ ಎಂದು ಸಿಬಿ ಶಶಿಧರ್ ಸ್ಪಷ್ಟಪಡಿಸಿದರು.
ಪ್ರತಿಭಟನೆಯ ಅಂತ್ಯದಲ್ಲಿ ಅವರು, “ಪ್ರಜಾಪ್ರಭುತ್ವ ಭಿಕ್ಷೆಯಲ್ಲ. ಅದು ಜನರ ಹಕ್ಕು. ಆ ಹಕ್ಕಿನ ಮೇಲೆ ಯಾರೇ ಕೈ ಹಾಕಿದರು ನಾವು ಮೌನವಾಗಿರುವುದಿಲ್ಲ. ಜೈ ಸಂವಿಧಾನ. ಜೈ ಪ್ರಜಾಪ್ರಭುತ್ವ. ಜೈ ಕರ್ನಾಟಕ” ಎಂದು ಘೋಷಿಸಿದರು.
ವರದಿ: ಆನಂದ್ ತಿಪ್ಟೂರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


