ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ಸುಗಳ ಮೇಲೆ ಅಳವಡಿಸಲಾಗಿದ್ದ ಗುಟ್ಕಾ ಜಾಹೀರಾತುಗಳನ್ನು ಕೆಲವರು ಹರಿದು ಹಾಕಿರುವ ಘಟನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಬಸ್ಸುಗಳ ಮೇಲೆ ವಿವಿಧ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದೆ. ಆದರೆ, ಗುಟ್ಕಾ ಕಂಪನಿಯ ಜಾಹೀರಾತುಗಳನ್ನು ಹಾಕಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೆಲವರು ಬಸ್ಸಿನ ಮೇಲಿದ್ದ ಜಾಹೀರಾತಿನ ಪೋಸ್ಟರ್‌ಗಳನ್ನು ಹರಿದು ಹಾಕಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು, “ಸಾರಿಗೆ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿದ್ದು, ಆದಾಯ ಕ್ರೋಢೀಕರಣಕ್ಕಾಗಿ ಜಾಹೀರಾತುಗಳನ್ನು ಅವಲಂಬಿಸಿದೆ. ಆದರೆ ಸರ್ಕಾರದ ಆಸ್ತಿಯಾದ ಬಸ್ಸುಗಳ ಮೇಲಿರುವ ಪೋಸ್ಟರ್ ಗಳನ್ನು ಕಾನೂನು ಕೈಗೆತ್ತಿಕೊಂಡು ಹರಿಯುವುದು ಸರಿಯಲ್ಲ. ಏನೇ ಆಕ್ಷೇಪಗಳಿದ್ದರೂ ಅದನ್ನು ಕಾನೂನುಬದ್ಧವಾಗಿ ತಿಳಿಸಬೇಕು,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಸಾರಿಗೆ ಇಲಾಖೆಯ ಜಾಹೀರಾತು ನೀತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಹಾನಿಕಾರಕ ಉತ್ಪನ್ನಗಳ ಜಾಹೀರಾತುಗಳನ್ನು ಬಸ್ಸುಗಳ ಮೇಲೆ ಹಾಕಬಾರದು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


