ದೊಡ್ಡಆಲದಮರ(ಹನುಮಂತನಗರ), ಜೋಡಿದೇವರಹಳ್ಳಿ, ನಾಗೇನಹಳ್ಳಿ, ಜೋಗಿಹಳ್ಳಿ, ಸೀಬಿಅಗ್ರಹಾರ, ಕುಂಟೇಗೌಡನಹಳ್ಳಿ, ನೆಲದಿಮ್ಮನಹಳ್ಳಿ, ಬಾಳಬಸವನಹಳ್ಳಿ, ಕಾಳೆನಳ್ಳಿ, ಅಮಲಗುಂದಿ, ಎಲ್. ಎಚ್. ಪಾಳ್ಯ, ಅಜ್ಜಯನಪಾಳ್ಯ, ಕಾಗೆನಿಂಗನಹಳ್ಳಿ, ಭೋವಿಪಾಳ್ಯ, ಎಲದಬಾಗಿ, ಮತ್ತು ಜವನಹಳ್ಳಿ ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಬ್ರಹ್ಮಸಂದ್ರ ಕೆಪಿಎಸ್ ಮ್ಯಾಗ್ನೆಟ್ ಅಡಿಯಲ್ಲಿ ಮುಚ್ಚುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ವಿರೋಧಿಸಿ, ಇಂದು ದೊಡ್ಡಆಲದಮರದಲ್ಲಿ ಬೃಹತ್ ಪೋಷಕರ ಪ್ರತಿಭಟನಾ ಸಮಾವೇಶ ನಡೆಯಿತು.
ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ AIDSO ರಾಜ್ಯ ಉಪಾಧ್ಯಕ್ಷರಾದ ಚಂದ್ರಕಲಾರವರು ಮಾತನಾಡುತ್ತಾ, “ಅಕ್ಟೋಬರ್ 15 ಹಾಗೂ ಡಿಸೆಂಬರ್ 30 2025 ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದಾದ್ಯಂತ ಗ್ರಾಮ ಪಂಚಾಯಿತಿಗೆ ಒಂದು ಸರ್ಕಾರಿ ಶಾಲೆಯಂತೆ, ಕೇವಲ ೬೦೦೦ ಶಾಲೆಗಳು ಉಳಿದು ೪೦,೦೦೦ ಸರ್ಕೆಕಾರಿ ಶಾಲೆಗಳು ನಶಿಸುವವು. ಅಂದರೆ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ. ಈಗಾಗಲೇ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಮತ್ತು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿ ವೃತ್ತಿಪರ ಶಿಕ್ಷಣವನ್ನು ಆರಂಬಿಸಲಾಗುವುದು. 6ನೇ ತರಗತಿಯಿಂದ ಮಕ್ಕಳಿಗೆ ಮಣ್ಣಿನ ಹಣತೆ ಮಾಡುವ, ಅಡಿಕೆ ಸುಲಿಯುವ ಕೌಶಲ್ಯಗಳನ್ನು ಕಲಿಸುವುದಾಗಿ ಶಿಕ್ಷಣ ಮಂತ್ರಿಗಳು ಬಹಿರಂಗಪಡಿಸಿದ್ದಾರೆ. ಕಾರ್ಮಿಕರ ಮಕ್ಕಳನ್ನು ಕಾರ್ಮಿಕರನ್ನಾಗಿಯೇ ಉಳಿಸುವುದು ಸರ್ಕಾರದ ಹುನ್ನಾರವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
AIDSO ರಾಜ್ಯ ಉಪಾಧ್ಯಕ್ಷರಾದ, ಅಪೂರ್ವ ರವರು ಮಾತನಾಡುತ್ತಾ, “ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಈಗಾಗಲೇ ಇಳಿಮುಖ ಪಡೆದು, ಜನರ ಆಕ್ರೋಶಕ್ಕೆ ಕಾರಣವಾಗಿದೆ” ಎಂದರು. ಇದರಿಂದಲೇ, 13 ಜನವರಿ 2026 ರಂದು, ಬ್ರಹ್ಮಸಂದ್ರ ಕೆಪಿಎಸ್ ಮ್ಯಾಗ್ನೆಟ್ ಕುರಿತು ಬಿಡುಗಡೆ ಮಾಡಿದ ಆದೇಶವು “ಬಿಇಓ ರವರ ಮೌಖಿಕ ಸೂಚನೆ ಮೇರಿಗೆ” ಎಂಬ ಶೀರ್ಷಿಕೆ ಅಡಿಯಲ್ಲಿ ಸುತ್ತಲಿನ 16 ಶಾಲೆಗಳ ಮುಖ್ಯೋಪಾಧ್ಯಾಯರಿಗೆ ತಲುಪಿದೆ. ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ಮಾನ್ಯ ಶಿಕ್ಷಣ ಸಚಿವ, ಮಧು ಬಂಗಾರಪ್ಪನವರು, ತನ್ನ ದೇಹದಲ್ಲಿ ಕನ್ನಡ ರಕ್ತ ಹರಿಯುವುದು ಎಂದು ಹೇಳುತ್ತಾರೆ. ಆದರೆ, ಹಿಂದಿನ ಬಾಗಿಲಿನಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸುತ್ತಿದ್ದಾರೆ. “ಒಂದೇ ಒಂದೇ ಸರ್ಕಾರಿ ಶಾಲೆಯನ್ನು ಮುಚ್ಚಿದಿಲ್ಲ, ಕೆಪಿಎಸ್ ಮ್ಯಾಗ್ನೆಟ್ ಬ್ರಹ್ಮಸಂದ್ರ ಆದೇಶ ರದ್ದು ಮಾಡುತ್ತಿದ್ದೇವೆ” ಎಂದು ಬಹಿರಂಗಪಡಿಸಲಿ; ಇಲ್ಲವಾದಲ್ಲಿ, ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುವುದು, ಎಂಬ ಹೆಚ್ಚರಿಕೆ ನೀಡಿದರು.
ಮುಖ್ಯ ಭಾಷಣಕಾರರಾದ, ಎಐಎಂಎಸ್ ಎಸ್ ನ ಜಿಲ್ಲಾಧ್ಯಕ್ಷರಾದ ಕಲ್ಯಾಣಿ ರವರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಈ ಹೋರಾಟವು ಸ್ವತಂತ್ರ ಹೋರಾಟವನ್ನು ನೆನಪಿಸುತ್ತಿದೆ. ಹೇಗೆ ಸ್ವತಂತ್ರ ಹೋರಾಟದಲ್ಲಿ ಮಕ್ಕಳಿಂದ ಹಿಡಿದು ವೃದ್ದರವರೆಗೆ ಹೊರಾಡಿ ಬ್ರೀಟಿಷರಿಂದ ಸ್ವತಂತ್ರ ಪಡೆದ ಇತಿಹಾಸ ನೆನಪನ್ನು ಈ ಸಮಾವೇಶವು ತಂದುಕೊಡುತ್ತದೆ. ಇಂದು ಸಹ ಅಂದಿನಂತೆಯೇ ಸರ್ಕಾರಿ ಶಾಲೆ ಉಳಿವಿಗಾಗಿ ಐತಿಹಾಸಿಕ ಪ್ರತಿಭಟನಾ ಹೋರಾಟದಲ್ಲಿ ಭಾಗವಹಿಸಿ, ಈ ಸಮಾವೇಶವನ್ನು ಶಸ್ವಿಗೊಳಿಸಿದ್ದೀರಾ ಎಂದು ಅಭಿನಂದಿಸಿದರು. ಇಂದು ಆಡಳಿತಾರೂಢ ಎಲ್ಲಾ ಸರ್ಕಾರಗಳು “ಶಿಕ್ಷಣ, ಆರೋಗ್ಯ ಹೀಗೆ ಎಲ್ಲಾಸಾರ್ವಜನಿಕ ಕೇತ್ರಗಳನ್ನು ಖಾಸಗಿಕರಣ ಮಾಡಿ ಶಿಕ್ಷಣ, ಆರೋಗ್ಯ ಕೇವಲ ಶ್ರೀಮಂತ ವರ್ಗದವರ ಸ್ವತ್ತಾಗುತ್ತದೆ, ತುಳಿತಕ್ಕೊಳ್ಳಗಾದವರನ್ನು ಗುಲಾಮಗಿರಿಗೆ ತಳ್ಳುತ್ತದೆ. ನಮಗೆ ಶಿಕ್ಷಣ ಸಿಕ್ಕರೆ ನಾವು ಈ ವ್ಯವಸ್ಥೆಯನ್ನು ಪ್ರಶ್ನಿಸುತ್ತೇವೆ; ಆದ್ದರಿಂದ ಜನಗಳನ್ನು ಅಂಧಕಾರಕ್ಕೆ ತಳ್ಳಬೇಕೆಂಬ ಯೋಚನೆ ಇದಾಗಿದೆ. ರೈತರು- ಕಾರ್ಮಿಕರು-ದಿನಗೂಲಿ ಕೆಲಸ ಮಾಡುವವರು ಬಹಳ ಕಷ್ಟದಿಂದ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆಗಳನ್ನು ಮುಚ್ಚಿದರೆ ಆ ಮಕ್ಕಳ ಗತಿ ಏನು? ರೈತ-ಕಾರ್ಮಿಕರು ಒಂದಾಗಿ ನಮ್ಮ ಮಕ್ಕಳಿಗೋಸ್ಕರ ಹೋರಾಟ ಕಟ್ಟಬೇಕಾಗಿದೆ.” ಎಂದು ಕರೆ ನೀಡಿದರು.
ಬಾಲಬಸವನಹಳ್ಳಿಯ ಗ್ರಾಮದ ರಮೇಶ್ ಸರ್ಕಾರ ಶಾಲೆಯನ್ನು ಮುಚ್ಚಲು ಬಂದರೆ ನಮ್ಮೂರಿನ ಜನರೆಲ್ಲಾ ಒಗ್ಗಟ್ಟಾಗಿ ಹೋರಾಡುತ್ತೇವೆ. ನಮ್ಮ ಜೀವ ಹೋದರು ನಮ್ಮೂರ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕನ್ನಡದ ಅಸ್ಮಿತೆಗೆ ಕನ್ನಡ ಶಾಲೆಗಳ ಉಳಿವು ಮುಖ್ಯ ಹೀಗಾಗಿ ಸರ್ಕಾರಿ ಶಾಲೆಯ ಉಳಿವಿಗಾಗಿ ನಾವೆಲ್ಲಾ ಮುಂದೆ ಇರುವುದಾಗಿ ಜೋಡಿದೇವರಳ್ಳಿಯ ಶ್ರೀನಿವಾಸ್ ತಿಳಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್ಓ ತುಮಕೂರು ಜಿಲ್ಲಾ ಕಾರ್ಯದರ್ಶಿಗಳಾದ ಲಕ್ಕಪ್ಪ ವಹಿಸಿದ್ದರು. ವಿವಿಧ ೧೩ ಹಳ್ಳಿಯ ಸಾರ್ವಜನಿಕ ಶಿಕ್ಷಣ ಸಮಿತಿಯ ಮುಖಂಡರು ಹಾಗೂ ಗ್ರಾಮಸ್ತರು, ಎಐಡಿಎಸ್‌ಓ ನ ಕಾರ್ಯಕರ್ತರಾದ ಭರತ್, ಸೈಯದ್ದ್. ವೃಷಭ್, ಸಂದೀಪ್, ಹುಸೇನಪ್ಪ, ಭೂತೇಶ್ ಉಪಸ್ಥಿತರಿದ್ದರು.
ಸರ್ಕಾರವು ಯೋಜನೆಯನ್ನು ಹಿಂಪಡೆದು ಅಧಿಕೃತವಾಗಿ ಆದೇಶ ಹೊರಡಿಸುವವರೆಗೂ ಈ ಹೋರಾಟ ಮುಂದುವರೆಯುತ್ತದೆ. ಹಾಗೂ ಜಿಲ್ಲೆಯ ಮೂಲೆ ಮೂಲೆಗೂ ಪ್ರತಿರೋಧ ಚಳುವಳಿಯು ಹರಡುತ್ತದೆ. ಎಂಬ ದೃಢ ಸಂಕಲ್ಪದೊಂದಿಗೆ ಸಮಾವೇಶವು ಮುಕ್ತಾಯವಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


