ತುಮಕೂರು: ನಗರದ ಪ್ರಸಿದ್ಧ ಪ್ರವಾಸಿ ತಾಣವಾದ ಅಮಾನಿಕೆರೆಯಲ್ಲಿರುವ ಗಾಜಿನಮನೆಯ ನವೀಕರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ (ಟೂಡಾ) ಮಹತ್ವದ ನಿರ್ಧಾರ ಕೈಗೊಂಡಿದೆ. ಶನಿವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಟೂಡಾ ಬಜೆಟ್ ಸಭೆಯಲ್ಲಿ ಹಲವು ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಗಾಜಿನಮನೆ ನವೀಕರಣ: ಅಮಾನಿಕೆರೆಯ ಗಾಜಿನಮನೆಯಲ್ಲಿ ಶಬ್ದ ನಿಯಂತ್ರಣ (Acoustics) ವ್ಯವಸ್ಥೆ ಮತ್ತು ಗಾಳಿ–ಮಳೆಯಿಂದ ಹಾನಿಗೊಳಗಾದ ಗಾಜುಗಳ ದುರಸ್ತಿಗಾಗಿ ಮೊದಲು ₹1.50 ಕೋಟಿ ಮೀಸಲಿಡಲಾಗಿತ್ತು. ಆದರೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರ ಸಲಹೆಯಂತೆ ಈ ಅನುದಾನವನ್ನು ₹3 ಕೋಟಿಗೆ ಹೆಚ್ಚಿಸಲಾಗಿದೆ.
ಜಲಕ್ರೀಡೆ ಅಕಾಡೆಮಿ: ಸಾಹಸ ಕ್ರೀಡೆಗಳಿಗೆ ಉತ್ತೇಜನ ನೀಡಲು ಅಮಾನಿಕೆರೆಯಲ್ಲಿ ಸುಸಜ್ಜಿತ ‘ಜಲಕ್ರೀಡೆ ಅಕಾಡೆಮಿ’ (Water Sports Academy) ಸ್ಥಾಪಿಸಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇಲ್ಲಿ ಕಯಾಕಿಂಗ್ ಮತ್ತು ಕೆನೋಯಿಂಗ್ ಕ್ರೀಡೆಗಳಿಗೆ ತರಬೇತಿ ನೀಡಲಾಗುವುದು.
ಹೊಸ ಬಡಾವಣೆ ನಿರ್ಮಾಣ: ಊರ್ಡಿಗೆರೆ ಹೋಬಳಿಯ ಮಾಚನಹಳ್ಳಿ ಗ್ರಾಮದ ಬಳಿ ಸುಮಾರು 56 ಎಕರೆ ಪ್ರದೇಶದಲ್ಲಿ ಹೊಸದಾಗಿ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಇದನ್ನು ರೈತರೊಂದಿಗೆ 50:50 ಅನುಪಾತದ ಪಾಲುದಾರಿಕೆಯಲ್ಲಿ ಅಥವಾ ಭೂಸ್ವಾಧೀನದ ಮೂಲಕ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ರಸ್ತೆ ಅಭಿವೃದ್ಧಿ: ರಿಂಗ್ ರಸ್ತೆಯ ದಿಬ್ಬೂರು ವೃತ್ತದಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸರ ಮಾರ್ಗದರ್ಶನದಂತೆ ರಸ್ತೆಯನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಟೂಡಾ ಆಯುಕ್ತ ಉಮೇಶ್ ಚಂದ್ರ ಬಜೆಟ್ ಮಂಡಿಸಿದರು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಪಾಲಿಕೆ ಆಯುಕ್ತರಾದ ಶುಭ, ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


