ನಮ್ಮ ತುಮಕೂರು, ಡಿಜಿಟಲ್ ಡೆಸ್ಕ್: ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಪೆರು ದೇಶದ ‘ಕುಸ್ಕೋ’ (Cusco) ಪಟ್ಟಣದಲ್ಲಿರುವ ಮಾರುಕಟ್ಟೆಯು ತನ್ನ ವಿಭಿನ್ನ ಹಾಗೂ ಕೆಲವೊಮ್ಮೆ ವಿಚಿತ್ರ ಎನಿಸುವ ವಸ್ತುಗಳಿಂದ ಸುದ್ದಿಯಲ್ಲಿದೆ. ಫ್ಲೈಯಿಂಗ್ ಪಾಸ್ಪೋರ್ಟ್ (Flying Passport) ಯೂಟ್ಯೂಬ್ ಚಾನೆಲ್ ನ ಕಿರಣ್ ಮತ್ತು ಆಶಾ ಅವರು ತಮ್ಮ ಪ್ರವಾಸದ ಅನುಭವವನ್ನು, ಅಚ್ಚರಿಯ ಸಂಗತಿಗಳನ್ನು ಹಂಚಿಕೊಂಡಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.
ಅಮೆಜಾನ್ ಕಾಡಿನ ಔಷಧೀಯ ಹಾವುಗಳು:
ಈ ಮಾರುಕಟ್ಟೆಯಲ್ಲಿ ಹಸಿ ಹಾವುಗಳನ್ನು ಮಾರಾಟ ಮಾಡುವುದು ಸಾಮಾನ್ಯ. ಸ್ಥಳೀಯರ ನಂಬಿಕೆಯಂತೆ, ಅಮೆಜಾನ್ ಕಾಡಿನಿಂದ ತರಲಾದ ಈ ಹಾವುಗಳು ಔಷಧೀಯ ಗುಣಗಳನ್ನು ಹೊಂದಿವೆ. ಮೈ ಸುಟ್ಟ ಗಾಯಗಳಿಗೆ ಅಥವಾ ಮೂಳೆ ಮುರಿತದಂತಹ ಸಮಸ್ಯೆಗಳಿಗೆ ಈ ಹಾವಿನ ವಿಷ ಮತ್ತು ಮಾಂಸವನ್ನು ಚಿಕಿತ್ಸೆಯಾಗಿ ಬಳಸಲಾಗುತ್ತದೆಯಂತೆ.
ಸತ್ತ ಬೇಬಿ ಲಾಮಾ ಮತ್ತು ವಿಚಿತ್ರ ಮಾಂಸ:
ಮಾರುಕಟ್ಟೆಯ ಒಂದು ಭಾಗದಲ್ಲಿ ಸತ್ತ ಬೇಬಿ ಲಾಮಾ (Baby Llama) ಪ್ರಾಣಿಯನ್ನು ಒಣಗಿಸಿ ಇಡಲಾಗಿರುತ್ತದೆ. ಇದನ್ನು ಅಲ್ಲಿನ ಸಂಪ್ರದಾಯದ ಭಾಗವಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ, ಗಿನಿಯಿಲಿ (Guinea Pig) ಮಾಂಸವನ್ನು ಜನರು ಹಸಿಯಾಗಿಯೇ ಮನೆಗೆ ಖರೀದಿಸಿಕೊಂಡು ಹೋಗುತ್ತಾರೆ. ಕುದುರೆ ಮಾಂಸದ ರುಚಿಯನ್ನು ಹೋಲುವ ‘ಅಲ್ಪಾಕ’ (Alpaca) ಪ್ರಾಣಿಯ ಮಾಂಸ ಇಲ್ಲಿ ಬಹಳ ಫೇಮಸ್ ಅಂತೆ.
3,000 ತಳಿಯ ಆಲೂಗಡ್ಡೆಗಳು:
ಪೆರು ದೇಶವು ಆಲೂಗಡ್ಡೆಗಳ ನಾಡು ಎಂದು ಪ್ರಸಿದ್ಧವಾಗಿದೆ. ಈ ಮಾರುಕಟ್ಟೆಯಲ್ಲಿ ಸುಮಾರು 3,000 ವಿವಿಧ ತಳಿಯ ಆಲೂಗಡ್ಡೆಗಳನ್ನು ಕಾಣಬಹುದು. ಕಪ್ಪು, ಕೆಂಪು, ಪಿಂಕ್ ಹೀಗೆ ಹತ್ತಾರು ಬಣ್ಣಗಳ ಆಲೂಗಡ್ಡೆಗಳು ಇಲ್ಲಿ ಲಭ್ಯವಿವೆ.
ಬಣ್ಣ ಬಣ್ಣದ ಜೋಳ ಮತ್ತು ಕಿನೋವಾ:
ನಮ್ಮಲ್ಲಿ ಕೇವಲ ಹಳದಿ ಜೋಳವನ್ನು ನೋಡುತ್ತೇವೆ, ಆದರೆ ಇಲ್ಲಿ ಕಪ್ಪು, ಕೆಂಪು, ಹಸಿರು ಮತ್ತು ಕಿತ್ತಳೆ ಬಣ್ಣದ ಜೋಳಗಳು ಸಿಗುತ್ತವೆ. ಜೊತೆಗೆ ಆರೋಗ್ಯಕ್ಕೆ ಉತ್ತಮವಾದ ಕಿನೋವಾ (Quinoa) ಧಾನ್ಯದ ವಿವಿಧ ತಳಿಗಳು ಇಲ್ಲಿ ಹೇರಳವಾಗಿವೆ.
ಮಾರುಕಟ್ಟೆಯ ಹಸಿ ಮಾಂಸದ ವಾಸನೆಯು ಪ್ರವಾಸಿಗರಿಗೆ ಸ್ವಲ್ಪ ಕಷ್ಟವೆನಿಸಿದರೂ, ಅಲ್ಲಿನ ಲೋಕಲ್ ವೈಬ್ ಮತ್ತು ಅಗ್ಗದ ಬೆಲೆಯ ವಸ್ತುಗಳು ಎಲ್ಲರನ್ನು ಆಕರ್ಷಿಸುತ್ತವೆ . ಸುಂದರವಾದ ಬೆಟ್ಟ ಗುಡ್ಡಗಳ ನಡುವೆ ಇರುವ ಈ ಕುಸ್ಕೋ ಹಳ್ಳಿಯು ಸಂಪ್ರದಾಯ ಮತ್ತು ವಿಚಿತ್ರಗಳ ಸಮ್ಮಿಲನದಂತಿದೆ ಎನ್ನುತ್ತಾರೆ ಆಶಾ ಮತ್ತು ಕಿರಣ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


