ತೆಲಂಗಾಣ: ಭಾರತೀಯ ಸಂಸ್ಕೃತಿಯಲ್ಲಿ ‘ಅತಿಥಿ ದೇವೋ ಭವ’ ಎಂಬ ಮಾತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಕಾಲಘಟ್ಟ ಮತ್ತು ಹೆಚ್ಚುತ್ತಿರುವ ಖರ್ಚು ವೆಚ್ಚಗಳಿಂದಾಗಿ ಮದುವೆ ಸಮಾರಂಭಗಳಲ್ಲಿ ಕರೆಯದೇ ಬರುವ ಅತಿಥಿಗಳು ಆಯೋಜಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ. ಇದೀಗ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಕಲ್ಯಾಣ ಮಂಟಪವೊಂದರ ಮುಂದೆ ಹಾಕಲಾಗಿರುವ ಬೋರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಮಹಬೂಬಾಬಾದ್ ನ ಕಲ್ಯಾಣ ಮಂಟಪವೊಂದರ ಪ್ರವೇಶ ದ್ವಾರದಲ್ಲಿ ತೆಲುಗು ಭಾಷೆಯ ಎಚ್ಚರಿಕೆ ಫಲಕವೊಂದನ್ನು ಹಾಕಲಾಗಿದೆ. ಇದರಲ್ಲಿ, “ಆಹ್ವಾನವಿಲ್ಲದೇ ಮದುವೆ ಅಥವಾ ಶುಭ ಸಮಾರಂಭಗಳಿಗೆ ಬಂದು ಊಟ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಬರೆಯಲಾಗಿದೆ.
ಈ ಎಚ್ಚರಿಕೆ ಫಲಕದ ಪ್ರಕಾರ, ಆಹ್ವಾನವಿಲ್ಲದೆ ಬರುವವರಿಗೆ 3 ತಿಂಗಳ ಜೈಲು ಶಿಕ್ಷೆ, 5,000 ರೂಪಾಯಿ ದಂಡ ವಿಧಿಸಲಾಗುವುದು ಅಂತಾ ಬರೆಯಲಾಗಿದೆ. ಇದನ್ನು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 329 (ಹಳೆಯ ಐಪಿಸಿ ಸೆಕ್ಷನ್ 441 — ಕ್ರಿಮಿನಲ್ ಅತಿಕ್ರಮಣ) ಅಡಿಯಲ್ಲಿ ಜಾರಿಗೆ ತರಲಾಗುವುದು ಎಂದು ಎಚ್ಚರಿಸಲಾಗಿದೆ.
ಸಮಾರಂಭಗಳಿಗೆ ಸಂಬಂಧವಿಲ್ಲದ ನೂರಾರು ಜನರು ಬಂದು ಊಟ ಮಾಡುವುದರಿಂದ, ಆಹ್ವಾನಿತ ಅತಿಥಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಅಲ್ಲದೆ, ಇದರಿಂದ ಕಾರ್ಯಕ್ರಮದ ಆಯೋಜಕರಿಗೆ ಆರ್ಥಿಕ ನಷ್ಟವೂ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ತಡೆಗಟ್ಟಲು ಕಲ್ಯಾಣ ಮಂಟಪದ ವ್ಯವಸ್ಥಾಪಕರು ಈ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಈ ಪೋಸ್ಟರ್ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ಕೆಲವರು ಇದು ಸರಿಯಾದ ಕ್ರಮ ಎಂದು ಬೆಂಬಲಿಸಿದರೆ, ಇನ್ನೂ ಕೆಲವರು ಮದುವೆಯಂತಹ ಸಮಾರಂಭಗಳಲ್ಲಿ ಹೀಗೆ ಮಾಡುವುದು ಅತಿಥಿ ಸತ್ಕಾರಕ್ಕೆ ವಿರುದ್ಧ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


