ಸಿಲ್ಚಾರ್ (ಅಸ್ಸಾಂ): ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಗಳನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಆದರೆ, ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಪಕ್ಷವು ಜನರಲ್ಲಿ ಭೀತಿ ಹುಟ್ಟಿಸುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಅಸ್ಸಾಂನ ಸಿಲ್ಚಾರ್‌ನಲ್ಲಿ ಸುಮಾರು 23,550 ಕೋಟಿ ರೂಪಾಯಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳ ತಾಪ ದೇಶದ ಜನರ ಮೇಲೆ ತಟ್ಟದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆ ವಹಿಸುತ್ತಿದೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ಜನರಲ್ಲಿ ಭಯ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಮೋದಿ ಟೀಕಿಸಿದರು.
“ಕಾಂಗ್ರೆಸ್‌ಗೆ ದೇಶದ ಅಥವಾ ಅಸ್ಸಾಂನ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಯಿಲ್ಲ. ಅವರಿಗೆ ಗೊತ್ತಿರುವುದು ಮೋದಿಯನ್ನು ನಿಂದಿಸುವುದು ಮತ್ತು ವದಂತಿಗಳನ್ನು ಹರಡಿ ಜನರನ್ನು ದಾರಿ ತಪ್ಪಿಸುವುದು ಮಾತ್ರ” ಎಂದು ಕಿಡಿಕಾರಿದರು.
ಸ್ವಾತಂತ್ರ್ಯಾನಂತರ ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್, ಬರಾಕ್ ಕಣಿವೆಯ ಅಭಿವೃದ್ಧಿಯನ್ನು ಕಡೆಗಣಿಸಿತ್ತು. ಆದರೆ ಬಿಜೆಪಿ ಸರ್ಕಾರವು ಈಗ ಈ ಭಾಗವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದು ಅವರು ತಿಳಿಸಿದರು.
22,864 ಕೋಟಿ ರೂ. ವೆಚ್ಚದ 166 ಕಿ.ಮೀ ಉದ್ದದ ಸಿಲ್ಚಾರ್-ಶಿಲ್ಲಾಂಗ್ ಎಕ್ಸ್‌ಪ್ರೆಸ್‌ವೇಗೆ ಭೂಮಿ ಪೂಜೆ ನೆರವೇರಿಸಿದರು. ಇದು ಗುವಾಹಟಿ ಮತ್ತು ಸಿಲ್ಚಾರ್ ನಡುವಿನ ಪ್ರಯಾಣದ ಸಮಯವನ್ನು 8.5 ಗಂಟೆಯಿಂದ 5 ಗಂಟೆಗೆ ಇಳಿಸಲಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


