ತುಮಕೂರು: ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿ ಮತ್ತು ಅಮೃತೂರು ಹೋಬಳಿಯ ವ್ಯಾಪ್ತಿಯ ದಲಿತರ ಕುಂದುಕೊರತೆಗಳ ಸಭೆಯನ್ನು ಇತ್ತೀಚೆಗೆ ಅಮೃತೂರು ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು. ಈ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಸಾರ್ವಜನಿಕ ಸೌಲಭ್ಯಗಳ ಬಗ್ಗೆ, ಸಮಸ್ಯೆಗಳ ಬಗ್ಗೆ ಹಲವು ಮುಖಂಡರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಹಂಚಿಕೊಂಡರು.
ಈ ಸಭೆಯಲ್ಲಿ ಮಾತನಾಡಿದ ಹೆಚ್.ಬಿ.ಪುಟ್ಟಬೋರಯ್ಯ ಅವರು, ಡಿ.ಹೊಸಹಳ್ಳಿ ಮಾರ್ಗದ ನಮ್ಮ ಗ್ರಾಮದ ಬಳಿ ಈ ಹಿಂದೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಒತ್ತಾಯಿಸಲಾಗಿತ್ತು. ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಅಂತಿಮವಾಗಿ ಬಸ್ ನಿಲುಗಡೆಗೆ ವರ್ಷದ ಹಿಂದೆಯೇ ಆದೇಶವಾಗಿದೆ. ಇಷ್ಟಾದರೂ ಸಹ ಕೆಲವು ಬಸ್ ಗಳು ಇಲ್ಲಿ ನಿಲುಗಡೆಯಾಗುತ್ತಿಲ್ಲ. ಇದರಿಂದ ಈ ಭಾಗದಲ್ಲಿ ಓಡಾಡುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕರಾದ ನವೀನ್ ಗೌಡ ಅವರು ಕೆಎಸ್ ಆರ್ ಟಿಸಿ ವ್ಯವಸ್ಥಾಪಕರೊಂದಿಗೆ ಮಾತನಾಡಿದರು. ಅಲ್ಲದೆ, ಆದೇಶ ಇದ್ದರೂ ಬಸ್ ಗಳನ್ನು ನಿಲ್ಲಿಸದೆ ಇರುವ ಬಗ್ಗೆ ಸೂಕ್ತ ಎಚ್ಚರಿಕೆ ನೀಡಿದರು. ಮುಂದಿನ ದಿನಗಳಲ್ಲಿ ಈ ಸಮಸ್ಯೆ ಸರಿಪಡಿಸುವಂತೆ ಕೆಎಸ್ ಆರ್ ಟಿಸಿ ವ್ಯವಸ್ಥಾಪಕರಿಗೆ ತಿಳಿಸಿದರು.
ಗ್ರಾಮದ ಸ್ಮಶಾನ ಭೂಮಿಯ ಬಗ್ಗೆ ಹಲವು ಮುಖಂಡರು ಚರ್ಚೆ ಮಾಡಿದರು. ಬೇರೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದು ವೃತ್ತ ನಿರೀಕ್ಷಕರು ತಿಳಿಸಿದರು.
ಗ್ರಾಮಗಳಲ್ಲಿ ಹೆಚ್ಚಾಗಿ ಮದ್ಯ ಮಾರಾಟ ನಡೆಯುತ್ತದೆ. ರಾತ್ರಿ ವೇಳೆ ಸರಬರಾಜು ಆಗುತ್ತದೆ. ಇದರಿಂದ ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಆದಕಾರಣ ಗ್ರಾಮಗಳಲ್ಲಿ ಅಂಗಡಿಗಳ ಒಳಗೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಅಕ್ರಮವಾಗಿ ಮಾರಾಟ ಮಾಡುವುದನ್ನು ತಪ್ಪಿಸಬೇಕು ಎಂದು ಹಲವು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅನಿಲ್ ಕುಮಾರ್, ಮಂಜಣ್ಣ, ಶಂಕರ್ ಸೇರಿದಂತೆ ಇತರೆ ಮುಖಂಡರುಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


