ತುಮಕೂರು: ಜಿಲ್ಲೆಯ ಎಲ್ಲಾ ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಮೇವು ಲಭ್ಯತೆಯನ್ನು ತಕ್ಷಣ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಪಶುಪಾಲನಾ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೇವು ಲಭ್ಯತೆ ಮತ್ತು ಬರ ಪರಿಸ್ಥಿತಿ ಹಾಗೂ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಅಭಿಯಾನ ಕುರಿತು ಚರ್ಚಿಸಿದ ಅವರು, ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರು ಹಾಗೂ ಮೇವಿನ ಬಗ್ಗೆ ಹೆಚ್ಚಿನ ನಿಗಾವಹಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರು ಮೇವಿನ ಲಭ್ಯತೆ ಕುರಿತು ಮಾಹಿತಿ ಸಂಗ್ರಹಿಸಿ ತಕ್ಷಣ ವರದಿ ಸಲ್ಲಿಸುವಂತೆ ಅವರು ಸಭೆಯಲ್ಲಿ ಸೂಚಿಸಿದರು.
ಎಲ್ಲಾ ತಾಲ್ಲೂಕು ಸಹಾಯಕ ನಿರ್ದೇಶಕರು ಪ್ರತಿದಿನ ಕನಿಷ್ಠ 10 ಬ್ಲಾಕ್ ಗಳಿಗೆ ಭೇಟಿ ನೀಡಿ, ಜಿಪಿಎಸ್ ಫೋಟೋಗಳೊಂದಿಗೆ ದೈನಂದಿನ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲು ಸೂಚಿಸಿದರು.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಬರದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ, ಎಲ್ಲಾ ಸಹಾಯಕ ನಿರ್ದೇಶಕರುಗಳು ತಮ್ಮ ವ್ಯಾಪ್ತಿಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಮೇವು ಲಭ್ಯತೆಯನ್ನು ಪರಿಶೀಲಿಸಿ ದೃಢೀಕರಿಸಿ ವರದಿಯನ್ನು ಕಳುಹಿಸಲು ಸೂಚಿಸಿದರು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಮೇವಿನ ಪರಿಸ್ಥಿತಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಈ ಬಾರಿ ಮುಂಗಾರಿನಲ್ಲಿ ಮಳೆಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮೇವಿನ ಅಭಾವ ಉಂಟಾಗುವ ಸಾಧ್ಯತೆ ಇರುವುದಾಗಿ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ರೈತರಿಗೆ ಮೇವಿನ ಬೀಜದ ಕಿರುಹೊಟ್ಟಣಗಳನ್ನು ವಿತರಣೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಪ್ರತಿಯೊಂದು ತಾಲ್ಲೂಕಿನಲ್ಲಿಯೂ ರೈತರಿಗೆ ವಿತರಣೆ ಮಾಡಲು ಅಗತ್ಯವಿರುವ ಮೇವಿನ ಬೀಜದ ಕಿರುಹೊಟ್ಟಣಗಳ ಬೇಡಿಕೆ ಪಟ್ಟಿಯನ್ನು ತಕ್ಷಣ ಸಲ್ಲಿಸಬೇಕು. ಜೊತೆಗೆ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ, ಪ್ರಸ್ತುತ ಮೇವಿನ ಲಭ್ಯತೆ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ವರದಿಯನ್ನು ಸಲ್ಲಿಸುವಂತೆ ಎಲ್ಲಾ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಫ್ರಿಕನ್ ಟಾಲ್ ಮೇಜ್/ಸೋರ್ಗಂ ಮಲ್ಟಿ ಕಟ್ ಮೇವಿನ ಬೀಜದ ಕಿರುಹೊಟ್ಟಣಗಳನ್ನು ನಿಯಮಾನುಸಾರ ಖರೀದಿ ಮಾಡಿ, ಮೇ 2026ರ ಮೊದಲ ವಾರದೊಳಗೆ ಸರಬರಾಜು ಮಾಡುವಂತೆ ಮಲ್ಲಸಂದ್ರದ ತುಮಕೂರು ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಕಾಲುಬಾಯಿ ರೋಗವನ್ನು ನಿಯಂತ್ರಿಸಿ ಹಾಗೂ ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಈ ಹಿನ್ನೆಲೆಯಲ್ಲಿ ಕಾಲುಬಾಯಿ ರೋಗದ ವಿರುದ್ಧ ಎಲ್ಲಾ ದನ, ಎಮ್ಮೆ ಮತ್ತು ಹಂದಿಗಳಿಗೆ ಉಚಿತವಾಗಿ ಲಸಿಕಾ ಕಾರ್ಯಕ್ರಮವನ್ನು ನಿಗದಿತ ದಿನಾಂಕಗಳಲ್ಲಿ ಹಮ್ಮಿಕೊಳ್ಳಬೇಕು.
ಎಲ್ಲಾ ತಾಲ್ಲೂಕುಗಳಲ್ಲಿ ಎಲ್ಲಾ ಜಾನುವಾರುಗಳಿಗೆ ಲಸಿಕೆ ಕಾರ್ಯಕ್ರಮವನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ತಿಳಿಸಿದ ಅವರು, ಮುಖ್ಯಮಂತ್ರಿಗಳವರು 16.04.2026 ರಂದು ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ನೀಡಿದ ನಿರ್ದೇಶನದಂತೆ KMF ವತಿಯಿಂದ ರೈತರಿಗೆ ಮೇವು ಕಿಟ್‌ಗಳನ್ನು ವಿತರಣೆ ಮಾಡುವ ಕ್ರಮ ಕೈಗೊಳ್ಳಬೇಕು. ಮೇವು ಕಿಟ್‌ಗಳು ಮೇ 5ರೊಳಗಾಗಿ ಲಭ್ಯವಾಗಲಿದ್ದು, ವಿತರಣೆಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ.
— ಶುಭ ಕಲ್ಯಾಣ್, ಜಿಲ್ಲಾಧಿಕಾರಿ
ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ರೋಗದ ಲಸಿಕೆಯನ್ನು ಹಾಕಿಸಿ, ರೋಗದಿಂದ ರಕ್ಷಿಸಿಕೊಳ್ಳಬೇಕು. ಇದರಿಂದ ಜಾನುವಾರುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಂಭವನೀಯ ಆರ್ಥಿಕ ನಷ್ಟವನ್ನು ತಪ್ಪಿಸಿಕೊಳ್ಳಬಹುದು ಎಂದು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ್ ಎಸ್., ತೋಟಗಾರಿಕೆ ಉಪನಿರ್ದೇಶಕಿ ಶಾರದಮ್ಮ, ಪಶುಪಾಲನೆ ಉಪನಿರ್ದೇಶಕ ಶಿವಪ್ರಸಾದ್ ಸೇರಿದಂತೆ ಗೊಬ್ಬರ ವಿತರಕರು, ಬೆಳೆ ವಿಮಾದಾರರು ಹಾಗೂ ತಾಲ್ಲೂಕು ಮಟ್ಟದ ಸಹಾಯಕ ನಿರ್ದೇಶಕರುಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


