ತುಮಕೂರು: ಸಾಮಾಜಿಕ ಬದಲಾವಣೆಗೆ ಬಸವಣ್ಣನವರ ತಮ್ಮ ವಚನಗಳ ಮೂಲಕ ಕೈಗೊಂಡ ವಿಚಾರಧಾರೆಯೂ ಭಾರತ ಸಂವಿಧಾನದಲ್ಲಿ ಅಡಕವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಗದಗ ಕನ್ನಡ ಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ತುಮಕೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದಲ್ಲಿ ಹಾಗೂ ಜಿಲ್ಲೆಯ ಸಮಸ್ತ ವೀರಶೈವ ಲಿಂಗಾಯತ ಸಮಾಜದ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
12ನೇ ಶತಮಾನದಲ್ಲಿ ಸಾಮಾಜಿಕ ಅಸಮತೋಲನ ನಿವಾರಿಸುವ ಬಸವಾದಿ ಶರಣರ ವಚನ ಕ್ರಾಂತಿಯಲ್ಲಿ ಜಾತ್ಯತೀತತೆ, ಸಮಸಮಾಜ ನಿರ್ಮಾಣ, ಸ್ತ್ರೀ ಸಂವೇದಿ ಧೋರಣೆಯಂತಹ ವಿಚಾರಧಾರೆಗಳು ಭಾರತ ಸಂವಿಧಾನದಲ್ಲಿ ಅಡಕವಾಗಿವೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಯಥಾವತ್ ಅನುಸರಣೆ ಮೂಲಕ ಬಸವಾದಿ ಶರಣರಿಗೆ ಗೌರವ ಸಲ್ಲಿಸಬೇಕು ಎಂದರು.
ಹುಟ್ಟು ಅನಿವಾರ್ಯವಾದುದು, ಆದರೆ ಬದುಕಿನ ಮೌಲ್ಯವನ್ನು ಹೆಚ್ಚಿಸುವುದು ನಮ್ಮ ಕೈಯಲ್ಲಿದೆ. ಜಗತ್ತಿಗೆ ಉತ್ತಮ ದಾರಿಯನ್ನು ತೋರಿಸಿ ಹೋಗುವವರೇ ನಿಜವಾಗಿ ಹೆಚ್ಚು ಬದುಕಿದವರು ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತುಮಕೂರು ತಾ. ತಹಶೀಲ್ದಾರ್ ರಾಜೇಶ್ವರಿ, ತುಮಕೂರು ಮಹಾನಗರ ಪಾಲಿಕೆ ಉಪಾಯುಕ್ತ ಸುಪ್ರಿಯಾ ಬಣಕಾರ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಡಾ.ಎಸ್ .ಪರಮೇಶ್, ಕದಳಿ ಮಹಿಳಾ ವೇದಿಕೆಯ ಶಿವಲಿಂಗಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ಟಿ.ಪಿ. ಓಪಿಲೇಶ್ವರ್, ಜಿ. ಮಲ್ಲಿಕಾರ್ಜುನಯ್ಯ, ಸಿದ್ದಗಂಗಮ್ಮ, ಟಿ.ಆರ್. ಸದಾಶಿವಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸುರೇಶ್ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


