ತುಮಕೂರು: ಕೇಂದ್ರ ಸರ್ಕಾರ ಮಂಡಿಸಿರುವ ‘ನಾರಿಶಕ್ತಿ ವಂದನ್ ಮಸೂದೆ’ಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಧೋರಣೆಯನ್ನು ಖಂಡಿಸಿ, ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜೆಡಿಎಸ್ ಕಚೇರಿಯಿಂದ ಬಿಜಿಎಸ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು ಮತ್ತು ಕಾರ್ಯಕರ್ತರು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಲಾಯಿತು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ಸಿಂಗಪ್ಪ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ಮಸೂದೆ ಮಂಡಿಸಿದರೆ, ಕಾಂಗ್ರೆಸ್ ಅದನ್ನು ತಿರಸ್ಕರಿಸುತ್ತಿದೆ. ಮಹಿಳೆಯರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿ,” ಎಂದು ಟೀಕಿಸಿದರು.
ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, “ಗ್ಯಾರಂಟಿಗಳ ಆಮಿಷವೊಡ್ಡಿ ಮಹಿಳೆಯರ ಹಾದಿ ತಪ್ಪಿಸಬಹುದು ಎಂದು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. ಆದರೆ ಮಹಿಳೆಯರು ಜಾಗೃತರಾಗಿದ್ದಾರೆ, ಮುಂಬರುವ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು ಎಚ್ಚರಿಸಿದರು.
ಮಾಜಿ ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ,”ಕಾಂಗ್ರೆಸ್ ನವರಿಗೆ ಮಹಿಳೆಯರ ಮೇಲೆ ಕಿಂಚಿತ್ತೂ ಗೌರವವಿಲ್ಲ. ಅವರಿಗೆ ರಾಜಕೀಯ ಅಧಿಕಾರ ನೀಡುವುದು ಇಷ್ಟವಿಲ್ಲ ಎಂಬುದು ಈ ಪ್ರತಿರೋಧದಿಂದ ಸಾಬೀತಾಗಿದೆ,” ಎಂದರು.
ತಿಪಟೂರು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, “2047ರ ವಿಕಸಿತ ಭಾರತದ ಕನಸಿಗೆ ಮಹಿಳಾ ಸಬಲೀಕರಣ ಅಡಿಪಾಯ. ಇಂತಹ ಉದಾತ್ತ ಮಸೂದೆಯನ್ನು ತಡೆಯುವ ಮೂಲಕ ಕಾಂಗ್ರೆಸ್ ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡರಾದ ಗುಬ್ಬಿ ನಾಗರಾಜು, ಕೊರಟಗೆರೆ ಅಧ್ಯಕ್ಷ ಕಾಮರಾಜು, ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್. ನಾಗರಾಜು, ನಗರಸಭೆ ಮಾಜಿ ಅಧ್ಯಕ್ಷ ಟಿ.ಹೆಚ್. ಜಯರಾಮ್, ಮಾಜಿ ಉಪಾಧ್ಯಕ್ಷ ಶ್ರೀನಿವಾಸಪ್ರಸಾದ್, ಮಾಜಿ ಸದಸ್ಯರಾದ ಟಿ.ಜಿ.ನರಸಿಂಹರಾಜು, ಮೋಹನ್ ಕುಮಾರ್, ಟಿ.ವಿ.ಬಾಲಕೃಷ್ಣ, ಹೆಚ್.ಆರ್. ಹನುಂತರಾಯಪ್ಪ, ಧರಣೇಂದ್ರಕುಮಾರ್, ಟಿ.ಹೆಚ್ .ಬಾಲಕೃಷ್ಣ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕುಸುಮಾ ಜಗನ್ನಾಥ್, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ನಾಗವಲ್ಲಿ ರಾಮು, ಯೋಗಾನಂದಕುಮಾರ್, ಕಲ್ಲಪಾಳ್ಯ ಲೋಕೇಶ್, ಹೆಬ್ಬೂರು ಗೋವಿಂದಪ್ಪ, ಲಕ್ಷ್ಮೀನರಸಿಂಹಯ್ಯ, ತಿಮ್ಮಾರೆಡ್ಡಿ, ಗೂಳೂರು ನವೀನ್, ರೇಖಾ ರಾಜ್, ಬೈರೇಶ್, ಗಂಗಣ್ಣ, ತಾಹೇರಾ ಕುಲ್ಸಂ, ಲೀಲಾವತಿ, ಲಕ್ಷ್ಮೀನಾಯಕ್, ತ್ರಿವೇಣಿ, ವಿಜಯಗೌಡ, ಕೆಂಪರಾಜು, ಉಪ್ಪಾರಹಳ್ಳಿ ಕುಮಾರ್, ಮಂಜುನಾಥ್ ಸೇರಿದಂತೆ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


