ತುಮಕೂರು: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ‘ನಾರಿಶಕ್ತಿ ವಂದನ್’ ಮಸೂದೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಅರ್ಧದಷ್ಟು ಜನಸಂಖ್ಯೆಯಾಗಿರುವ ಮಹಿಳೆಯರಿಗೆ ದ್ರೋಹ ಬಗೆದಿದೆ ಎಂದು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ ಕಿಡಿಕಾರಿದ್ದಾರೆ.
ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರ ನಿಜವಾದ ಸಬಲೀಕರಣಕ್ಕಾಗಿ ತಂದ ಮಸೂದೆಯನ್ನು ‘ಇಂಡಿ’ ಒಕ್ಕೂಟವು ತಿರಸ್ಕರಿಸಿದೆ. ಇದು ಕೇವಲ ಬಿಜೆಪಿಯ ಮಹಿಳೆಯರಿಗಲ್ಲದೆ, ಎಲ್ಲಾ ಪಕ್ಷಗಳ ಮಹಿಳೆಯರ ರಾಜಕೀಯ ಅವಕಾಶವನ್ನು ಕಸಿದುಕೊಂಡಂತಾಗಿದೆ ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವು ಜಲಜೀವನ್ ಮಿಷನ್ ಮೂಲಕ 15 ಕೋಟಿ ಮನೆಗಳಿಗೆ ನೀರು, 10 ಕೋಟಿ ಉಜ್ವಲ ಅನಿಲ ಸಂಪರ್ಕ, 12 ಕೋಟಿ ಶೌಚಾಲಯ ಹಾಗೂ 4 ಕೋಟಿಗೂ ಹೆಚ್ಚು ಮನೆಗಳನ್ನು ಮಹಿಳೆಯರ ಹೆಸರಿನಲ್ಲಿ ನೀಡಿದೆ ಎಂದು ಶಾಸಕರು ವಿವರಿಸಿದರು.
ಸಂಸತ್ ಭವನ ನಿರ್ಮಾಣ, ಆರ್ಟಿಕಲ್ 370 ರದ್ದತಿ, ರಾಮಮಂದಿರ ನಿರ್ಮಾಣ, ಸಿಎಎ ಜಾರಿ ಹಾಗೂ ಸರ್ಜಿಕಲ್ ಸ್ಟ್ರೈಕ್‌ನಂತಹ ದೇಶಹಿತದ ಕಾರ್ಯಗಳನ್ನು ಕಾಂಗ್ರೆಸ್ ಸದಾ ವಿರೋಧಿಸುತ್ತಾ ಬಂದಿದೆ. ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಕುಗ್ಗಿಸಲು ಕಾಂಗ್ರೆಸ್ ಹಿಂಜರಿಯುವುದಿಲ್ಲ ಎಂದು ಅವರು ಆರೋಪಿಸಿದರು.
“ಸಂವಿಧಾನಬದ್ಧವಾಗಿ ಸಿಗಬೇಕಿದ್ದ ರಾಜಕೀಯ ಹಕ್ಕನ್ನು ಕಸಿದುಕೊಂಡ ಕಾಂಗ್ರೆಸ್ ಪಕ್ಷವನ್ನು ಮುಂಬರುವ ಚುನಾವಣೆಯಲ್ಲಿ ಮಹಿಳೆಯರು ತಿರಸ್ಕರಿಸಬೇಕು. ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಮುಂದಾಗಬೇಕು.”
— ವಸಂತ ಸುದರ್ಶನ್, ಬಿಜೆಪಿ ನಗರ ಅಧ್ಯಕ್ಷೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ಜಿಲ್ಲಾ ವಕ್ತಾರ ಟಿ.ಆರ್. ಸದಾಶಿವಯ್ಯ, ಜಿಲ್ಲಾ ಕಾರ್ಯದರ್ಶಿ ಜ್ಯೋತಿ ತಿಂದೇಸ್ವಾಮಿ, ನಗರ ಅಧ್ಯಕ್ಷ ಟಿ.ಕೆ. ಧನುಷ್, ಮುಖಂಡರಾದ ಜೆ. ಜಗದೀಶ್, ಲತಾ ಬಾಬು ಹಾಗೂ ಮರಿತಿಮ್ಮಯ್ಯ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


