ಕೊಡಿಗೇನಹಳ್ಳಿ (ತುಮಕೂರು ಜಿಲ್ಲೆ): ಮಗಳ ಪ್ರಿಯಕರನ ಜೊತೆ ಸೇರಿ ಅತ್ತೆಯೇ ತನ್ನ ಅಳಿಯನನ್ನು ಕೊಲೆ ಮಾಡಿರುವ ಭೀಕರ ಘಟನೆ ಇಲ್ಲಿನ ದಂಡೀಪುರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಅತ್ತೆ ಜಯಮ್ಮ (50), ಆಕೆಯ ಪುತ್ರ ನಂದೀಶ್ (35) ಮತ್ತು ಮಗಳ ಪ್ರಿಯಕರ ಅಮರ್ ನಾರಾಯಣ್ (23) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನು ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ. ಇವರು ಮೂರು ವರ್ಷಗಳ ಹಿಂದೆ ಜಯಮ್ಮ ಅವರ ಪುತ್ರಿ ಸುಜಾತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಮತ್ತು ಅತ್ತೆ ಮನೆಯಲ್ಲೇ ವಾಸವಾಗಿದ್ದರು. ಆದರೆ, ಸುಜಾತಾ ಅವರು ಅನಾರೋಗ್ಯದ ಕಾರಣದಿಂದ ಕಳೆದ ಜನವರಿ 31ರಂದು ಮೃತಪಟ್ಟಿದ್ದರು.
ಸುಜಾತಾ ಬದುಕಿದ್ದಾಗ ಆಕೆಗೆ ಅಮರ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಈ ವಿಷಯವಾಗಿ ನರಸಿಂಹಮೂರ್ತಿ ಅವರು ಅತ್ತೆ ಜಯಮ್ಮ ಅವರೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದರು. ಇದರಿಂದ ರೋಸಿಹೋದ ಜಯಮ್ಮ, ತನ್ನ ಮಗ ನಂದೀಶ್ ಮತ್ತು ಮಗಳ ಪ್ರಿಯಕರ ಅಮರ್ ಜೊತೆ ಸೇರಿ ಅಳಿಯನನ್ನು ಮುಗಿಸಲು ಸಂಚು ರೂಪಿಸಿದ್ದರು.
ಏಪ್ರಿಲ್ 18ರಂದು ರಾತ್ರಿ ನರಸಿಂಹಮೂರ್ತಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ನಂತರ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಅವರ ತಂಗಿ ಗಾಯತ್ರಿ ಅವರ ಮನೆಯ ಮುಂದೆ ಬಿಟ್ಟು ಬಂದಿದ್ದರು. ಗಾಯತ್ರಿ ಅವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟರಲ್ಲೇ ನರಸಿಂಹಮೂರ್ತಿ ಮೃತಪಟ್ಟಿದ್ದರು.
ನರಸಿಂಹಮೂರ್ತಿ ಅವರ ಕುತ್ತಿಗೆ ಮತ್ತು ಕಿವಿಯ ಬಳಿ ಗಾಯದ ಗುರುತುಗಳಿದ್ದವು. ಇದನ್ನು ಗಮನಿಸಿದ ತಂಗಿ ಗಾಯತ್ರಿ ಅವರು ನೀಡಿದ ದೂರಿನ ಮೇರೆಗೆ ಕೊಡಿಗೇನಹಳ್ಳಿ ಪೊಲೀಸರು ತನಿಖೆ ಕೈಗೊಂಡು, ಘಟನೆ ನಡೆದ 24 ಗಂಟೆಯೊಳಗೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಧುಗಿರಿ ಸಿಪಿಐ ಹನುಮಂತರಾಯಪ್ಪ ಮತ್ತು ಕೊಡಿಗೇನಹಳ್ಳಿ ಪಿಎಸ್ ಐ ರಾಜೇಶ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


