ತುಮಕೂರು: ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ದಾಖಲಾತಿ ಕೋರಿ ಬರುತ್ತಿರುವ ವಿದ್ಯಾರ್ಥಿನಿಯರಿಗೆ ಉರ್ದು ಒಂದು ಭಾಷೆಯನ್ನಾಗಿ ನೀಡಲು ನಿರಾಕರಿಸುತ್ತಿರುವ ವಿಚಾರವಾಗಿ ಪಿ.ಯು. ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಹಲವು ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉರ್ದು ಭಾಷೆ ವಿಷಯದೊಂದಿಗೆ ತೇರ್ಗಡೆ ಹೊಂದಿ ಪ್ರಥಮ ವರ್ಷದ ಪಿಯುಸಿಯ ದಾಖಲಾತಿಗೆ ಎಂಪ್ರೆಸ್ ಮಹಿಳಾಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಿಗೆ ಸಂಪರ್ಕಿಸಿದಾಗ ಪ್ರಾಂಶುಪಾಲ ಡಿ.ಬಿ.ಅನ್ನಪೂರ್ಣ ಉರ್ದು ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ನಿರಾಕರಿಸುತ್ತಿದ್ದಾರೆ. ಉರ್ದು ಬದಲು ಹಿಂದಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಿದ್ದು, ಇಲ್ಲವಾದಲ್ಲಿ ಬೇರೆ ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಬಂದ ಮುಸ್ಲಿಂ ಮಹಿಳಾ ವಿದ್ಯಾರ್ಥಿನಿಯರಿಗೆ ಹಾಗೂ ಅವರ ಪೋಷಕರಿಗೆ ಹೇಳುತ್ತಿದ್ದಾರೆ.
ಪ್ರಾಂಶುಪಾಲರ ಈ ನಡತೆಯಿಂದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತುಂಬಾ ಅನಾನುಕೂಲತೆ ಹಾಗೂ ಅನ್ಯಾಯವಾಗುತ್ತಿದ್ದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆ ಆಗುತ್ತಿದೆ. ಈಗಾಗಲೇ ಹಿಂದಿನ ವರ್ಷದಲ್ಲಿ ಮೊದಲ ಪಿಯುಸಿ ಉತ್ತೀರ್ಣರಾಗಿ ಈಗ ದ್ವಿತೀಯ ಪಿಯು ದಾಖಲಾತಿ ಹೊಂದಿರುವ ವಿದ್ಯಾರ್ಥಿನಿಯರು ಉರ್ದು ಭಾಷೆಯೊಂದಿಗೆ ವ್ಯಾಸಂಗ ಮಾಡಬೇಕಾಗಿರುತ್ತದೆ, ಪ್ರಾಂಶುಪಾಲ ಡಿ. ಬಿ. ಅನ್ನಪೂರ್ಣ ಅವರು ಪ್ರಥಮ ಪಿಯುಸಿಗೆ ದಾಖಲಾತಿ ಬಯಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉರ್ದು ಭಾಷೆಯನ್ನೇ ಇಲ್ಲದಂತೆ ಮಾಡುವ ಹುನ್ನಾರ, ಉದ್ದೇಶ ಪೂರ್ವಕವಾಗಿ ಮಾಡುತ್ತಿದ್ದಾರೆ.
ಇದೇ ಉದ್ದೇಶದಿಂದ ಪ್ರಾಂಶುಪಾಲ ಡಿ. ಬಿ. ಅನ್ನಪೂರ್ಣ ಈ ಹಿಂದೆ ಎಂಪ್ರೆಸ್ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2021–22 ರಿಂದ 2025–26ರ ವರೆಗೆ ಹೊರಗುತ್ತಿಗೆ ಆಧಾರದ ಮೇಲೆ ಉರ್ದು ಭಾಷೆಯನ್ನು ಬೋಧಿಸುತ್ತಿದ್ದ ಬಿ. ಬಿ. ಆಯಿಷಾ ಇವರಿಗೆ ಉದ್ದೇಶ ಪೂರ್ವಕವಾಗಿ ಬೋಧನ ಕೆಲಸದಿಂದ ತೆಗೆದು ಹಾಕಿರುತ್ತಾರೆ. ಅಷ್ಟೇ ಅಲ್ಲದೆ ಅವರ ಬದಲಿಗೆ ಬೇರೆ ಯಾರಿಗೂ ನೇಮಕ ಮಾಡಿಕೊಂಡಿರುವುದಿಲ್ಲ. ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ನಿರಾಕರಿಸಿ ಪ್ರಾಂಶುಪಾಲರು ಕರ್ತವ್ಯಲೋಪವೆಸಗಿರುತ್ತಾರೆ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಹುನ್ನಾರ ನಡೆಸುತ್ತಿದ್ದಾರೆ.
ಉರ್ದು ಪ್ರಥಮ ಭಾಷೆ ಆಯ್ಕೆ ಮಾಡಿಕೊಂಡು ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯಲು ಬರುವ ಎಲ್ಲಾ ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ದಾಖಲಾತಿ ಪಡೆಯಲು ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಉರ್ದು ಭಾಷೆಯನ್ನು ಬೋಧಿಸಲು ಬೋಧಕರನ್ನು ಕಡ್ಡಾಯವಾಗಿ ನೇಮಕಾತಿ ಮಾಡಿ ಕೊಳ್ಳಲು ಸರ್ಕಾರಿ ಎಂಪ್ರೆಸ್ ಮಹಿಳಾ ಕಾಲೇಜ್ ನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲು ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಅವರಿಗೆ ತಹರೀಕ್ ಎ ಉರ್ದು ಅದಬ್ನ್ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸದಸ್ಯರು ಮನವಿ ಮಾಡಿಕೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


