ತುಮಕೂರು: ಊರುಕೆರೆ ಹೋಬಳಿಯ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ್ದ ನವಿಲುಗಳ ಸಾವಿಗೆ ಎಚ್ 5ಎನ್ 1 ವೈರಾಣು ಸೋಂಕು ಕಾರಣ ಎಂದು ದೃಢಪಟ್ಟಿದೆ. ಆದರೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ರಾಜ್ಯ ಸಾಂಕ್ರಾಮಿಕ ರೋಗಗಳ ಜಾಗೃತಿ ಸಮಿತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಏಪ್ರಿಲ್ 16ರಂದು ಊರುಕೆರೆ ಹೋಬಳಿಯ ಕೋಳಿಹಳ್ಳಿ ಅರಣ್ಯ ಪ್ರದೇಶದಲ್ಲಿ ನವಿಲುಗಳ ಅಸಾಧಾರಣ ಸಾವು ಸಂಭವಿಸಿತ್ತು. ಮೃತ ನವಿಲು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಇದೀಗ ಎಚ್ 5ಎನ್ 1 ವೈರಾಣು ಸೋಂಕಿನಿಂದ ನವಿಲುಗಳು ಮೃತಪಟ್ಟ ಬಗ್ಗೆ ದೃಢಪಟ್ಟಿದೆ. ಜಿಲ್ಲಾಡಳಿತ ತಕ್ಷಣ ತ್ವರಿತ ಸ್ಪಂದನಾ ತಂಡ (QRT)ವನ್ನು ರಚಿಸಿದ್ದು ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ವಹಿಸಿದೆ ಎಂದು ಅವರು ತಿಳಿಸಿದರು.
ಊರುಕೆರೆ ಹೋಬಳಿಯ ಐದು ಹಳ್ಳಿಗಳಾದ ಕೋಳಿಹಳ್ಳಿ, ಉಳ್ಳೇನಹಳ್ಳಿ, ಬೊಮ್ಮನಹಳ್ಳಿ, ಭೈರಸಂದ್ರ, ಕಲ್ಲಹಳ್ಳಿ ಗ್ರಾಮಗಳಲ್ಲಿ ಹಾಗೂ ಸುತ್ತಲಿನ 10 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಅರಣ್ಯ ಇಲಾಖೆ, ಪಶು ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡವನ್ನು ರಚಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ ಕೋಳಿ ಸಾಕಾಣಿಕೆ ಮಾಡುವವರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ಭಾಗದ ಕೋಳಿ ಅಂಗಡಿಗಳು ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.
ಎಚ್ 5ಎನ್ 1 ವೈರಾಣು ಮಾರಣಾಂತಿಕ ಸೋಂಕುವಾದ್ದರಿಂದ ಸಾರ್ವಜನಿಕರು ಜಾಗೃತಿ ವಹಿಸುವ ಅಗತ್ಯವಿದೆ. ಯಾವುದಾದರೂ ಕೋಳಿ ಫಾರಂಗಳಲ್ಲಿ ಕೋಳಿಗಳು ಅಸಾಧಾರಣ ಸಾವು ಕಂಡುಬಂದಲ್ಲಿ ಸ್ಮಾರ್ಟ್ ಸಿಟಿ ಕಂಟ್ರೋಲ್ ರೂಮ್ ನಂಬರಿಗೆ ತಿಳಿಸಬೇಕು ಎಂದರು.
ಕೋಳಿಗಳ ಅಸಾಧಾರಣ ಸಾವಿನ ಸಂಬಂಧ ಕೋಳಿಫಾರಂ ಮಾಲೀಕರು ಹಾಗೂ ಅಕ್ಕಪಕ್ಕದ ಮನೆಯವರು ಎಲ್ಲಿಯೂ ಹೋಗದಂತೆ ಮನೆಯಲ್ಲೇ ಇರಲು ಹಾಗೂ ಕೋಳಿ ತ್ಯಾಜ್ಯವನ್ನು ಭೂಮಿಯಲ್ಲಿ ಆಳವಾಗಿ ಹೂಳಲು ಸೂಚಿಸಲಾಗಿದೆ. ಕೋಳಿ ಫಾರಂಗಳಿಗೆ ಸೋಡಿಯಂ ಹೈಪೋ ಕ್ಲೋರೈಟ್ ಸಿಂಪಡಣೆ ಇತ್ಯಾದಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದರು.
ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಹಾಗೂ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದರು. ಕೋಳಿ ಪದಾರ್ಥ ತಿನ್ನುವವರು ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸುವುದು ಸೂಕ್ತ ಎಂದೂ ಅವರು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಸಾಂಕ್ರಾಮಿಕ ರೋಗ ಜಾಗೃತಿ ಸಮಿತಿಯ ಡಾ. ಚಂದ್ರಶೇಖರ್, ಡಾ. ಶ್ರೀನಿವಾಸ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಎಂ. ಚಂದ್ರಶೇಖರ್, ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ಡಾ. ಶಿವಪ್ರಸಾದ್, ಉಪ ಅರಣ್ಯ ವಲಯಾಧಿಕಾರಿ ಬನ್ನಿಮಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ರೋಗವು ವನ್ಯಜೀವಿಗಳಿಂದ ಹರಡುವ ಸಾಧ್ಯತೆ ಇರುವುದರಿಂದ ಹೇಗೆ ಹರಡುತ್ತದೆ ಎಂಬುದು ಹೇಳಲು ಆಗುವುದಿಲ್ಲ. ಕೋಳಿಹಳ್ಳಿ ಪ್ರಕರಣ ನಂತರ ಈವರೆಗೆ ನವಿಲುಗಳ ಸತ್ತ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಮತ್ತು ಸಾಕು ಪ್ರಾಣಿಗಳಿಗೂ ಈ ರೋಗ ಹರಡಿರುವ ಬಗ್ಗೆ ತಿಳಿದುಬಂದಿಲ್ಲ. ಆದರೆ ಇಂದು ಮುಂಜಾನೆ ಬೊಮ್ಮನಹಳ್ಳಿ ಕೋಳಿ ಫಾರಂನಲ್ಲಿ 15 ಕೋಳಿಗಳು ಮೃತಪಟ್ಟಿದ್ದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ಬಳಿಕ ರಾಜ್ಯ ಸರ್ಕಾರ ಹಾಗೂ ರಾಜ್ಯ ಜಾಗೃತಿ ಸಮಿತಿ ಸೂಚಿಸುವ ಮಾರ್ಗದರ್ಶನದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-
ಶುಭ ಕಲ್ಯಾಣ್, ಜಿಲ್ಲಾಧಿಕಾರಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


