ತುಮಕೂರು: ಕೊರಟಗೆರೆ ತಾಲ್ಲೂಕು ವಡೇರಹಳ್ಳಿ ಗ್ರಾಮದ ಬಳಿ ಬಫರ್ ಡ್ಯಾಂ ನಿರ್ಮಾಣ ವಿರೋಧಿಸಿ ಸೋಮವಾರ ಡಿಸಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಡ್ಯಾಂ ನಿರ್ಮಿಸಬಾರದೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಎತ್ತಿನಹೊಳೆ ಯೋಜನೆಯಡಿ ಈ ಬಫರ್ ಡ್ಯಾಂ ನಿರ್ಮಾಣಕ್ಕೆ ಯೋಜಿಸಿದ್ದು, ಡ್ಯಾಂ ನಿರ್ಮಾಣದಿಂದ ಮನೆ, ಆಸ್ತಿ ಜಮೀನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ವಡೇರಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬಫರ್ ಡ್ಯಾಂ ನಿರ್ಮಾಣ ಮಾಡದಂತೆ ಆಗ್ರಹಿಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ನೀಡಿದರು.
ಸುಮಾರು 1.2 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಬಫರ್ ಡ್ಯಾಂ ಅನ್ನು ವಡೇರಹಳ್ಳಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕೆ ತಮ್ಮ ಸಂಪೂರ್ಣ ವಿರೋಧವಿದೆ ಎಂದು ವಡೇರಹಳ್ಳಿ, ಕಾಟೇನಹಳ್ಳಿ, ಅಂಕೋನಹಳ್ಳಿ, ನಾಯಕನಪಾಳ್ಯ, ಚಿನಾಗೇಹಳ್ಳಿ, ನಂದಿಪುರ, ಗಾಣದ ಹುಣ್ಣಿ ಸೇರಿ ಹಲವು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಜನವಸತಿಯಲ್ಲಿ, ನೂರಾರು ವರ್ಷಗಳಿಂದ ವಾಸವಿರುವ ಜಾಗದಲ್ಲಿ ಬಫರ್ ಡ್ಯಾಂ ನಿರ್ಮಾಣದ ಕ್ರಮ ಸರಿಯಲ್ಲ. ಡ್ಯಾಂ ನಿರ್ಮಾಣವಾದರೆ ತಮ್ಮ ಗ್ರಾಮಗಳು ಮತ್ತು ಭೂಮಿ ಮುಳುಗಡೆಯಾಗುತ್ತವೆ. ಡ್ಯಾಂ ನಿರ್ಮಾಣದಿಂದ ಮನೆ, ಜಮೀನು, ಆಸ್ತಿ ಹಾಗೂ ಜೀವನೋಪಾಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಗ್ರಾಮಸ್ಥರು ಎಂದು ಆಕ್ರೋಶ ಹೊರಹಾಕಿದರು.
ವಡೇರಹಳ್ಳಿ ಬಳಿ ಯಾವುದೇ ಕಾರಣಕ್ಕೂ ಡ್ಯಾಂ ನಿರ್ಮಿಸಬಾರದು. ಇಲ್ಲಿ ಬಫರ್ ಡ್ಯಾಂ ನಿರ್ಮಾಣವಾದರೆ ಗ್ರಾಮಗಳ ಅಸ್ತಿತ್ವಕ್ಕೆ ಅಪಾಯಕ್ಕೆ ಸಿಲುಕಲಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದರು.
ವಡೇರಹಳ್ಳಿ ರೈತ ಮುಖಂಡ ಬಿ.ಪಿ.ಸಂಜೀವಗೌಡ ಮಾತನಾಡಿ, ನಮ್ಮ ವಡೇರಹಳ್ಳಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಎತ್ತಿನಹೊಳೆ ಯೋಜನೆಯ ಬಫರ್ ಡ್ಯಾಂ ಅವೈಜ್ಞಾನಿಕ. ನಾವು ನಮ್ಮ ಪ್ರಾಣ ಬೇಕಾದರೂ ನೀಡುತ್ತೇವೆ. ಆದರೆ ನಮ್ಮ ಕೃಷಿ ಜಮೀನು ಮಾತ್ರ ಬಫರ್ ಡ್ಯಾಂಗೆ ನೀಡುವುದಿಲ್ಲ. ರಾಜ್ಯ ಸರ್ಕಾರ ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು. ನಮ್ಮ ಜಾಗದಲ್ಲಿ ಬಿಟ್ಟು ಬೇರೆ ಯಾವ ಪ್ರದೇಶದಲ್ಲಾದರೂ ಡ್ಯಾಂ ನಿರ್ಮಿಸಿಕೊಳ್ಳಲಿ. ಡ್ಯಾಂ ನಿರ್ಮಿಸಿ ರೈತರ ಬದುಕು ಕಸಿದುಕೊಳ್ಳಬೇಡಿ ಎಂದು ಆಗ್ರಹಿಸಿದರು.
ಪ್ರಾಣಿಪರ ಹೋರಾಟಗಾರ ಕೃಷ್ಣೇಗೌಡ ಮಾತನಾಡಿ, ಡ್ಯಾಂ ನಿರ್ಮಾಣಕ್ಕೆ ರೈತರ ಒಪ್ಪಿಗೆಯನ್ನು ಪಡೆಯದೆ ಏಕಾಏಕಿ ನಿರ್ಮಾಣಕ್ಕೆ ಕೈಗೊಂಡಿರುವ ಸರ್ಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಪ್ರಾಣ ಬೇಕಾದರೂ ಕೊಡುತ್ತೇವೆ ಆದರೆ ನಮ್ಮ ಭೂಮಿ ಬಿಡೋಕ್ಕೆ ಮಾತ್ರ ಯಾರು ಬಂದು ನಮ್ಮನ್ನು ಪರೀಕ್ಷೆ ಮಾಡಬೇಡಿ. ಎತ್ತಿನಹೊಳೆ ಯೋಜನೆಯ ಭಾಗವಾಗಿ ನಿರ್ಮಿಸುತ್ತಿರುವ ಬಫರ್ ಡ್ಯಾಂ ಅವೈಜ್ಞಾನಿಕವಾಗಿದೆ ಎಂದು ಹಲವು ನೀರಾವರಿ ತಜ್ಞರು ಹೇಳಿದ್ದಾರೆ. ಆದರೂ, ನಿರ್ಮಾಣಕ್ಕೆ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯ ಬಳಿಕ ಗ್ರಾಮಸ್ಥರು ಎಡಿಸಿ ಶಿವಪ್ಪಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಡ್ಯಾಂ ಯೋಜನೆಯನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿದರು. ಈ ವೇಳೆ ಗ್ರಾಮದ ನೂರಾರು ರೈತರು ಭಾಗಿಯಾಗಿದ್ದರು.
ಬೈರಗೊಂಡ್ಲು, ಲಕ್ಕೇನಹಳ್ಳಿ ಬಿಟ್ಟು, ವಡೇರಹಳ್ಳಿ ಮಾತ್ರ ಏಕೆ..?
ನಾವು ಎತ್ತಿನಹೊಳೆ ಯೋಜನೆಯ ವಿರೋಧಿಗಳಲ್ಲ. ಆದರೆ, ಯೋಜನೆಯ ಭಾಗವಾಗಿ ವಡೇರಹಳ್ಳಿಯ ಬಳಿ ಬಫರ್ ಡ್ಯಾಂ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಜಲಾಶಯ ನಿರ್ಮಾಣ ಮಾಡುವುದಕ್ಕೆ ಬಿಡುವುದಿಲ್ಲ. ಎತ್ತಿನಹೊಳೆ ಯೋಜನೆ 2013ರಲ್ಲಿ ಸುರುವಾದಾಗಿನಿಂದ ವಡೇರಹಳ್ಳಿ, ದುರ್ಗದಹಳ್ಳಿ ಸೇರಿದಂತೆ ಈ ಗ್ರಾಮದ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಯೋಜನೆಯ ಆರಂಭದಲ್ಲೇ ದುರ್ಗದಹಳ್ಳಿ ಬಳಿ ಡ್ಯಾಂ ನಿರ್ಮಾಣಕ್ಕೆ ಮಾಡಲು ಮುಂದಾಗಿ ಕಾರಣಾಂತರಗಳಿಂದ ಕೈಬಿಡಲಾಯಿತು. ನಂತರ ಬೈರಗೊಂಡ್ಲು ಜಲಾಶಯ ಮಾಡಲು ಮುಂದಾಗಿ ರೈತರ ವಿರೋಧದ ಹಿನ್ನೆಲೆಯಲ್ಲಿ ಅಲ್ಲೂ ಯೋಜನೆಯನ್ನು ಕೈಬಿಡಲಾಯಿತು. ಬಳಿಕ ಲಕ್ಕೇನಹಳ್ಳಿ ಬಳಿ ನಿರ್ಮಾಣಕ್ಕೆ ಮುಂದಾಗಿ ಅಲ್ಲಿಯೂ ಕೈಬಿಟ್ಟು, ಈಗ ವಡೇರಹಳ್ಳಿ ಬಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ. ಇಲ್ಲಿಯ ಪ್ರತಿಯೊಬ್ಬ ರೈತನೂ ಭೂಮಿ ನಂಬಿಯೇ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ನಮಗೆ ವಿರೋಧವಿದೆ ಎಂದು ರೈತ ಕೆಂಪರಾಜು ಆಕ್ರೋಶ ಹೊರಹಾಕಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


