ತುಮಕೂರು: ನಂಬಿದ ಕೆಲಸಗಾರನೇ ಅಸ್ತ್ರವಾಗಿ ಮಾಲೀಕನಿಗೆ ಲಕ್ಷಾಂತರ ರೂಪಾಯಿ ನಾಮ ಹಾಕಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಲಾರಿ ಟ್ರಾನ್ಸ್‌ಪೋರ್ಟ್ ಗುತ್ತಿಗೆ ಕೊಡಿಸುವುದಾಗಿ ನಂಬಿಸಿ ‘ಬುಕ್ ಲಾಜಿಸ್ಟಿಕ್ ಟ್ರಾನ್ಸ್‌ಪೋರ್ಟ್’ ಮಾಲೀಕ ಬಸವರಾಜು ಅವರಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ವಂಚಿಸಲಾಗಿದೆ.
ದೂರುದಾರ ಬಸವರಾಜು ಅವರ ಬಳಿ ಕೆಲಸಕ್ಕಿದ್ದ ಸತೀಶ್ ಎಂಬಾತನೇ ಈ ವಂಚನೆಯ ಸೂತ್ರಧಾರ. ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ‘ಎಪಿಎಲ್ ಅಪೊಲೋ ಪೈಪಿಂಗ್ ಸಿಸ್ಟಮ್’ (APL Apollo Piping System) ಎಂಬ ಹೊಸ ಶಾಖೆ ಆರಂಭವಾಗಿದೆ ಎಂದು ಮಾಲೀಕರಿಗೆ ನಂಬಿಸಿದ್ದಾನೆ. ಅಲ್ಲಿಗೆ ಲಾರಿಗಳ ಟ್ರಾನ್ಸ್ ಪೋರ್ಟ್ ಗುತ್ತಿಗೆ ಕೊಡಿಸುವುದಾಗಿ ಆಮಿಷವೊಡ್ಡಿದ್ದಾನೆ. ಕಂಪನಿಯ ಪ್ರತಿನಿಧಿ ರಾಮಪ್ರಸಾದ್ ಎಂಬ ಹೆಸರಿನಲ್ಲಿ ಕರೆ ಮಾಡಿಸಿ ಮಾಲೀಕರನ್ನು ನಂಬಿಸಲಾಗಿದೆ. ಗುತ್ತಿಗೆ ಪಡೆಯಲು 4 ಲಕ್ಷ ರೂಪಾಯಿ ಠೇವಣಿ ಇಡಬೇಕು ಎಂದು ನಂಬಿಸಿ, ಹಂತ ಹಂತವಾಗಿ ಹಣ ಪಡೆದಿದ್ದಾರೆ. ಆರಂಭದಲ್ಲಿ 1 ಲಕ್ಷ ರೂಪಾಯಿ ಪಡೆದು, ನಂತರ ಒಟ್ಟು 4 ಲಕ್ಷ ರೂಪಾಯಿಗಳನ್ನು ಪೀಕಿದ್ದಾರೆ.
ಹಣ ನೀಡಿದರೂ ಯಾವುದೇ ಕರಾರು ಪತ್ರ (Agreement) ನೀಡದಿದ್ದಾಗ ಅನುಮಾನಗೊಂಡ ಬಸವರಾಜು ಅವರು ನೇರವಾಗಿ ಕಂಪನಿಗೆ ಭೇಟಿ ನೀಡಿದ್ದಾರೆ. ಅಲ್ಲಿ ವಿಚಾರಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಕಂಪನಿಯಲ್ಲಿ ರಾಮಪ್ರಸಾದ್ ಎಂಬ ಹೆಸರಿನ ಯಾವುದೇ ವ್ಯಕ್ತಿ ಕೆಲಸ ಮಾಡುತ್ತಿಲ್ಲ ಎಂಬುದು ದೂರುದಾರರಿಗೆ ತಿಳಿದುಬಂದಿದೆ.
“ತನ್ನ ಬಳಿಯೇ ಕೆಲಸ ಮಾಡುತ್ತಿದ್ದ ವ್ಯಕ್ತಿ ಸುಳ್ಳು ಹೇಳಿ, ನಕಲಿ ವ್ಯಕ್ತಿಗಳ ಮೂಲಕ ಕರೆ ಮಾಡಿಸಿ ವಂಚಿಸಿದ್ದಾನೆ” ಎಂದು ಬಸವರಾಜು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


