ತುಮಕೂರು: ಸೋಶಿಯಲ್ ಮೀಡಿಯಾದಲ್ಲಿ ಹರಿದುಬರುವ ಆಮಿಷದ ಜಾಹೀರಾತುಗಳನ್ನು ನಂಬುವ ಮುನ್ನ ಎಚ್ಚರ! ಇನ್ ಸ್ಟಾಗ್ರಾಮ್ ನಲ್ಲಿ ಕೇರಳ ಲಾಟರಿ ಗೆದ್ದಿರುವುದಾಗಿ ನಂಬಿದ ತುಮಕೂರಿನ ಮಹಿಳೆಯೊಬ್ಬರು ಬರೊಬ್ಬರಿ 1.81 ಲಕ್ಷ ರೂಪಾಯಿ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.
ನಗರದ ಮಹಾಲಕ್ಷ್ಮೀ ನಗರದ ನಿವಾಸಿ ಟಿ.ಎಂ. ರೇಖಾ ಎಂಬುವವರು ಇನ್ ಸ್ಟಾಗ್ರಾಮ್ ವೀಕ್ಷಿಸುತ್ತಿದ್ದಾಗ ಕೇರಳ ಲಾಟರಿಗೆ ಸಂಬಂಧಿಸಿದ ರೀಲ್ಸ್ ಒಂದನ್ನು ನೋಡಿದ್ದಾರೆ. ಇದನ್ನು ನಂಬಿದ ಅವರು ಆನ್ ಲೈನ್ ವಂಚಕರ ಸಂಪರ್ಕಕ್ಕೆ ಬಂದಿದ್ದಾರೆ. ಏಪ್ರಿಲ್ 21 ರಂದು ಲಾಟರಿ ಹಣದ ಆಸೆಗೆ ಬಿದ್ದ ರೇಖಾ ಅವರಿಗೆ, ಬಹುಮಾನದ ಮೊತ್ತವನ್ನು ಪಡೆಯಬೇಕಾದರೆ ವಿವಿಧ ಶುಲ್ಕಗಳನ್ನು ಪಾವತಿಸಬೇಕೆಂದು ವಂಚಕರು ನಂಬಿಸಿದ್ದಾರೆ.
ವಂಚಕರ ಮಾತನ್ನು ನಂಬಿದ ಮಹಿಳೆ, ಏಪ್ರಿಲ್ 21 ರಿಂದ ಏಪ್ರಿಲ್ 25 ರ ನಡುವೆ ವಿವಿಧ ಹಂತಗಳಲ್ಲಿ ಒಟ್ಟು 1,81,037 ರೂ.ಗಳನ್ನು ಆನ್ ಲೈನ್ ಮೂಲಕ ವರ್ಗಾಯಿಸಿದ್ದಾರೆ. ಎಷ್ಟು ಹಣ ಪಾವತಿಸಿದರೂ ಯಾವುದೇ ಬಹುಮಾನದ ಮೊತ್ತ ಕೈಸೇರದಿದ್ದಾಗ, ತಾವು ಮೋಸ ಹೋಗಿರುವುದು ಅವರಿಗೆ ಅರಿವಾಗಿದೆ.
ತಕ್ಷಣ ಎಚ್ಚೆತ್ತುಕೊಂಡ ರೇಖಾ ಅವರು ಹಣ ವರ್ಗಾವಣೆ ಮಾಡಿದ ದಾಖಲೆಗಳೊಂದಿಗೆ ನಗರದ ಸಿಇಎನ್ (CEN/NEPS) ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆನ್ ಲೈನ್ ನಲ್ಲಿ ಲಾಟರಿ, ಉಡುಗೊರೆ ಅಥವಾ ಹಣದ ಆಮಿಷ ಒಡ್ಡುವ ಅಪರಿಚಿತ ಲಿಂಕ್ ಗಳು ಮತ್ತು ಜಾಹೀರಾತುಗಳ ಬಗ್ಗೆ ಜಾಗರೂಕರಾಗಿರಿ. ಯಾವುದೇ ಕಾರಣಕ್ಕೂ ಅಪರಿಚಿತರ ಖಾತೆಗೆ ಹಣ ವರ್ಗಾಯಿಸಬೇಡಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


