ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗಕ್ಕೆ 30 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ವಿಭಾಗದ ಹಿರಿಯ ವಿದ್ಯಾರ್ಥಿಗಳ ವೇದಿಕೆಯ ನೇತೃತ್ವದಲ್ಲಿ ಮೇ 15ರಂದು ಇತಿಹಾಸೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಡಿಜಿಟಲ್ ಯುಗದ ಐತಿಹಾಸಿಕ ಸಂಶೋಧನೆಯಲ್ಲಿ ವೈಜ್ಞಾನಿಕ ಪ್ರಗತಿ ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ವಿಭಾಗದ ಹಿರಿಯ ವಿದ್ಯಾರ್ಥಿಗಳು ಹಾಗೂ ಚೆನ್ನೈನ ಸೇವ್ ಅವರ್ ಕಂಟ್ರಿ ಫೌಂಡೇಶನ್ ಸಹಯೋಗದಲ್ಲಿ ಬೆಳಗ್ಗೆ 9ರಿಂದ ಇತಿಹಾಸೋತ್ಸವ ಮೆರವಣಿಗೆ ಹಾಗೂ ನಾಣ್ಯ ಪ್ರದರ್ಶನ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ವಹಿಸಲಿದ್ದು, ಸಾಹಿತಿ ಪ್ರೊ. ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯ, ಕಲ್ಬುರ್ಗಿಯ ವಿಶ್ರಾಂತ ಸಮಕುಲಪತಿ ಪ್ರೊ. ಎಸ್. ಚಂದ್ರಶೇಖರ್ ಭಾಗವಹಿಸಲಿದ್ದಾರೆ. ಕುಲ ಸಚಿವ ನಾಹಿದಾ ಝಮ್ ಝಮ್ ಹಾಗೂ ವಿಭಾಗದ ಮುಖ್ಯಸ್ಥ ಪ್ರೊ. ಪಿ.ಎಲ್. ರಾಜು ಉಪಸ್ಥಿತರಿರುವರು.
ಬೆಂಗಳೂರಿನ ಕರ್ನಾಟಕ ಲಲಿತಕಲಾ ಪರಿಷತ್ನ ಲಲಿತ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್.ಎಚ್. ಕುಲಕರ್ಣಿ ಅವರು ಸೈಂಟಿಫಿಕ್ ಟೂಲ್ಸ್ ಅವೈಲಬಲ್ ಫಾರ್ ರಿಸರ್ಚ್ ಗ್ಯಾಪ್ ಇನ್ ಹಿಸ್ಟೋರಿಕಲ್ ಸ್ಟಡೀಸ್ ಕುರಿತು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಡಿಜಿಟಲ್ ಟೆಕ್ನಾಲಜಿ ಇನ್ ಹೆರಿಟೇಜ್ ಸ್ಟಡೀಸ್ ಕನ್ಸರ್ವೇಷನ್ ಆಂಡ್ ಎಜ್ಯುಕೇಶನ್ ವಿಷಯದ ಕುರಿತು ಡಿಜಿಟೂರ್ ಟೆಕ್ನಾಲಜೀಸ್ನ ಆನಂದ್ ಬಾಬು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಜಮುನಾ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ವಿಭಾಗದ ಹಿರಿಯ ವಿದ್ಯಾರ್ಥಿಗಳಾದ ಡಾ. ಮಹೇಶ್ ಕುಮಾರ್ ಅವರ ಅಂಬೇಡ್ಕರ್ ಚಿಂತನೆಗಳು ಹಾಗೂ ಡಾ. ಯೋಗೀಶ ಎ. ಅವರ ತುಮಕೂರು ಜಿಲ್ಲೆಯಲ್ಲಿ ಸೂಫಿ ಸಂಸ್ಕೃತಿ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಅಪರಾಹ್ನ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಪ್ರೊ. ಎಲ್. ಪಿ. ರಾಜು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


