ತುಮಕೂರು: ಕೇಂದ್ರ ಸರ್ಕಾರದ ಆನ್ ಲೈನ್ ಔಷಧ ಮಾರಾಟ ನೀತಿಯನ್ನು ವಿರೋಧಿಸಿ ಹಾಗೂ ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ಮೇ 20ರಂದು ಜಿಲ್ಲೆಯಾದ್ಯಂತ ಔಷಧ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಲು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ನಿರ್ಧರಿಸಿದೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಪದಾಧಿಕಾರಿಗಳು, ಆನ್‌ಲೈನ್ ಮೂಲಕ ಔಷಧ ಮಾರಾಟ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಅಲ್ಲದೆ, ಇದರಿಂದ ಸಾಂಪ್ರದಾಯಿಕ ಔಷಧ ವ್ಯಾಪಾರಿಗಳ ಜೀವನೋಪಾಯಕ್ಕೆ ಸಂಕಷ್ಟ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶದ ಔಷಧ ಅಂಗಡಿಗಳು ಅಂದು ಪೂರ್ಣ ಪ್ರಮಾಣದಲ್ಲಿ ಬಂದ್ ಆಗಲಿವೆ.
ಆನ್‌ಲೈನ್ ಔಷಧ ಮಾರಾಟಕ್ಕೆ ಪರವಾನಗಿ ನೀಡಬಾರದು, ಔಷಧಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಮತ್ತು ಔಷಧ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ.
“ಆನ್ ಲೈನ್‌ನಲ್ಲಿ ವೈದ್ಯರ ಚೀಟಿ ಇಲ್ಲದೆ ಔಷಧಗಳು ಸುಲಭವಾಗಿ ಲಭ್ಯವಾಗುತ್ತಿರುವುದು ಯುವ ಪೀಳಿಗೆಯನ್ನು ಮಾದಕ ವ್ಯಸನದತ್ತ ತಳ್ಳುವ ಅಪಾಯವಿದೆ. ಈ ಅಪಾಯವನ್ನು ತಡೆಯಲು ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು” ಎಂದು ಸಂಘದ ಅಧ್ಯಕ್ಷರು ಒತ್ತಾಯಿಸಿದರು.
ಅಂದು ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ಸಂಘಟನೆ ಸಿದ್ಧತೆ ನಡೆಸಿದೆ. ಈ ಬಂದ್‌ಗೆ ಸಾರ್ವಜನಿಕರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


