ತುಮಕೂರು: ಜಿಲ್ಲೆಯ ಕದ್ರಿಹಳ್ಳಿ ತಾಂಡಾದಲ್ಲಿ ಮಹಿಳೆಯೊಬ್ಬರನ್ನು ಗೃಹಬಂಧನದಲ್ಲಿಟ್ಟು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಪ್ರಕರಣವೊಂದನ್ನು ಭೇದಿಸಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು, ಸಂತ್ರಸ್ತೆಯನ್ನು ಯಶಸ್ವಿಯಾಗಿ ರಕ್ಷಿಸಿದೆ.
ಕದ್ರಿಹಳ್ಳಿ ತಾಂಡಾದ ಮಹಿಳೆಯ ತಂದೆ ದೇವೇಂದ್ರನಾಯ್ಕ ಅವರು ಪ್ರಾಧಿಕಾರಕ್ಕೆ ಲಿಖಿತ ದೂರು ಸಲ್ಲಿಸಿದ್ದರು. ಸುಮಾರು 14 ವರ್ಷಗಳ ಹಿಂದೆ ತಮ್ಮ ಮಗಳನ್ನು ತುಮಕೂರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಂಡ ಹಾಗೂ ಆತನ ಕುಟುಂಬದವರು ಮಗಳಿಗೆ ತೀವ್ರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದು, ಆಕೆಯನ್ನು ಮನೆಯಲ್ಲೇ ಕೂಡಿಹಾಕಿದ್ದಾರೆ. ಇದರಿಂದ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ ಎಂದು ದೂರಿನಲ್ಲಿ ವಿವರಿಸಿದ್ದರು.
ದೂರನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಧಿಕಾರವು ಇದನ್ನು ವ್ಯಾಜ್ಯಪೂರ್ವ ಪ್ರಕರಣವನ್ನಾಗಿ ದಾಖಲಿಸಿಕೊಂಡಿತ್ತು. ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎದುರುದಾರರಿಗೆ (ಗಂಡನ ಮನೆಯವರಿಗೆ) ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ನೋಟಿಸ್ ನೀಡಲು ಹೋದ ದಲಾಯತ್ ಅವರೊಂದಿಗೆ ವ್ಯಂಗ್ಯವಾಗಿ ವರ್ತಿಸಿದ ಆರೋಪಿಗಳು ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದರು.
ಆರೋಪಿಗಳ ಉದ್ಧಟತನವನ್ನು ಗಮನಿಸಿದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ನೂರುನ್ನಿಸಾ ಅವರು ಖುದ್ದಾಗಿ ತಮ್ಮ ತಂಡದೊಂದಿಗೆ ಕದ್ರಿಹಳ್ಳಿ ತಾಂಡಾಕ್ಕೆ ಭೇಟಿ ನೀಡಿದರು. ನ್ಯಾಯಾಧೀಶರು ಸ್ಥಳಕ್ಕೆ ಬಂದಾಗಲೂ ಗಂಡನ ಕುಟುಂಬಸ್ಥರು ವಾಗ್ವಾದಕ್ಕಿಳಿದು ಅಸಹಕಾರ ತೋರಿದರು. ಪರಿಸ್ಥಿತಿಯನ್ನು ಸಂಯಮದಿಂದ ನಿಭಾಯಿಸಲು ನ್ಯಾಯಾಧೀಶರು ಪ್ರಯತ್ನಿಸಿದರೂ ಎದುರುದಾರರು ಪಟ್ಟು ಬಿಡಲಿಲ್ಲ.
ವಾಗ್ವಾದ ನಡೆಯುತ್ತಿದ್ದ ಸಂದರ್ಭದಲ್ಲೇ ಮನೆಯ ಒಳಗಿನಿಂದ ಅಳುತ್ತಾ ಬಂದ ಮಹಿಳೆಯ ಸ್ಥಿತಿಯನ್ನು ಕಂಡ ನ್ಯಾಯಾಧೀಶರು, ಆಕೆಯ ದಯನೀಯ ಸ್ಥಿತಿಯನ್ನು ಅವಲೋಕಿಸಿ ಕೂಡಲೇ ರಕ್ಷಣೆಗೆ ಮುಂದಾದರು. ಮಾನಸಿಕವಾಗಿ ಕುಗ್ಗಿದ್ದ ಮಹಿಳೆಯನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಸೂಚನೆ ನೀಡಿದ್ದಾರೆ.
ನ್ಯಾಯಾಧೀಶರೇ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಕಾನೂನು ಕ್ರಮಗಳು ಮುಂದುವರಿದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


