ತುಮಕೂರು: ಉದ್ಯೋಗಿ ಪ್ರಯಾಣಿಕರು ಮೆಜೆಸ್ಟಿಕ್ ತಲುಪಲು ಅನುಕೂಲವಾಗುವಂತೆ ನಗರದಿಂದ ಬೆಳಗ್ಗೆ 8ಕ್ಕೆ ಹೊರಡುವ ತುಮಕೂರು — ಯಶವಂತಪುರ ಮೆಮು ರೈಲು ಹೊರಡುವ ಸಮಯವನ್ನು ಬೆಳಗ್ಗೆ 7.45ಕ್ಕೆ ಬದಲಾಯಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಅಶುತೋಷ್ ಕೆ.ಸಿಂಗ್ ಭರವಸೆ ನೀಡಿದರು.
ಬುಧವಾರ ಬೆಂಗಳೂರಿನಲ್ಲಿ ನಡೆದ ನೈಋತ್ಯ ರೈಲ್ವೆ ವಲಯದ ಬೆಂಗಳೂರು ವಿಭಾಗದ ರೈಲು ಪ್ರಯಾಣಿಕರ ಸಲಹಾ ಸಮಿತಿ ಸಭೆಯಲ್ಲಿ ಸಮಿತಿ ಸದಸ್ಯ ಹಾಗೂ ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್ ಅವರ ಮನವಿಗೆ ಸ್ಪಂದಿಸಿ ಮಾತನಾಡಿದರು.
ಉದ್ಯೋಗಿ ಪ್ರಯಾಣಿಕರಿಗಾಗಿಯೇ ಆರಂಭಿಸಿದ ಸದರಿ ಮೆಮು ರೈಲು ಆರಂಭದಿಂದಲೂ ಕೆಎಸ್ಆರ್ ವರೆಗೆ ಸಾಗುತ್ತಿತ್ತು. ಆದರೆ ಶಿವಮೊಗ್ಗ ಜನಶತಾಬ್ದಿ ರೈಲಿಗೆ ದಾರಿ ಮಾಡಿಕೊಡಲು ಮೆಮು ರೈಲನ್ನು ಯಶವಂತಪುರಕ್ಕೆ ಸೀಮಿತಗೊಳಿಸಲಾಯಿತು. ಇದರಿಂದ ಸಾವಿರಕ್ಕೂ ಹೆಚ್ಚು ಉದ್ಯೋಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಆರ್ಥಿಕವಾಗಿಯೂ ಹೊರೆಯಾಗುತ್ತಿದೆ. ವಿಳಂಬದಿಂದ ಉದ್ಯೋಗ ಕಳೆದುಕೊಳ್ಳುವಂತಾಗಿದೆ ಎಂದು ಪ್ರಯಾಣಿಕರ ಸಮಸ್ಯೆಯನ್ನು ಬಿಡಿಸಿ ವಿವರಿಸಿ, ಈ ಹಿನ್ನೆಲೆಯಲ್ಲಿ ಮೆಮು ರೈಲನ್ನು ಕೆಎಸ್ ಆರ್ ವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಡಿಆರ್ ಎಂ, ಕೆಎಸ್ ಆರ್ ನಲ್ಲಿ ಪ್ಲಾಟ್ ಫಾರಂಗಳ ತೀವ್ರ ತೊಂದರೆಯಿದ್ದು ಮೆಮು ವಿಸ್ತರಣೆ ಸಾಧ್ಯವಿಲ್ಲ ಎಂದರಲ್ಲದೆ, ನಿಮ್ಮ ಸಲಹೆಯಂತೆ ಸಮಯ ಬದಲಾವಣೆ ಮಾಡಿ ಯಶವಂತಪುರದಲ್ಲಿ ಕೋಲಾರ–ಬೆಂಗಳೂರು ರೈಲಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಸಕಾರಾತ್ಮಕವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಪ್ಲಾಟ್ ಫಾರಂಗಳ ಕೊರತೆ ಹಿನ್ನೆಲೆಯಲ್ಲಿ ಸದರಿ ನಿಲ್ದಾಣವನ್ನು ಪಾಸಿಂಗ್ ಥ್ರೂ ನಿಲ್ದಾಣವನ್ನಾಗಿಸಿದರೆ ಹೆಚ್ಚು ರೈಲುಗಳನ್ನು ಬೆಂಗಳೂರಿನವರೆಗೆ ವಿಸ್ತರಿಸಬಹುದಾಗಿದೆ. ಈ ಬಗ್ಗೆ ಗಮನ ಹರಿಸಬೇಕೆಂದು ಕರಣಂ ರಮೇಶ್ ಸಲಹೆ ನೀಡಿದರು.
ಯಶವಂತಪುರ — ತುಮಕೂರು ನಡುವೆ ಸಂಚರಿಸುವ ಮೆಮು ರೈಲುಗಳಿಗೆ ಭೈರನಾಯಕನಹಳ್ಳಿ, ಮುದ್ದಲಿಂಗನಹಳ್ಳಿ, ನಿಡವಂದ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಬೇಕೆಂಬ ಮನವಿಗೆ ಉತ್ತರಿಸಿದ ಡಿ ಆರ್ ಎಂ, ಎಲ್ಲಾ ಮೆಮು ರೈಲುಗಳಿಗೆ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲು ಸಾಧ್ಯವಾಗದು. ಆದರೆ ಮುದ್ದ ಲಿಂಗನಹಳ್ಳಿಯಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಚಾಮರಾಜನಗರ ತುಮಕೂರಿಗೆ ಬರುವ ರೈಲು ಸಂಚಾರವನ್ನು ಮಧ್ಯಾಹ್ನಕ್ಕೆ ಬದಲಾಗಿ ಸಂಜೆ 4.30 ಕ್ಕೆ ಬೆಂಗಳೂರಿನಿಂದ ಹೊರಡುವಂತೆ ಮಾಡಬೇಕು. ಇದರಿಂದ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ನೇರ ರೈಲು ಸಂಪರ್ಕ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ವಿದ್ಯಾರ್ಥಿಗಳು, ಉದ್ಯೋಗಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು ಹಾಗೂ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಕರಣಂ ರಮೇಶ್ ಮಾಡಿದ ಮನವಿಗೆ ಉತ್ತರಿಸಿದ ಡಿಆರ್‌ಎಂ ಅಶುತೋಷ್ ಕೆ.ಸಿಂಗ್ ಅವರು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಸಮಿತಿಯ ಕಾರ್ಯದರ್ಶಿ, ಸೀನಿಯರ್ ಡಿಸಿಎಂ ಕೃಷ್ಣ ಚೈತನ್ಯ, ಸೀನಿಯರ್ ಡಿಸಿಎಂ ಪ್ರಿಯ ಮತ್ತಿತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


