ತುಮಕೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಡುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಬಾಲಕನೊಬ್ಬ ಮೊಬೈಲ್ ನಲ್ಲಿ ಗೇಮ್ ಆಡುತ್ತಿದ್ದಾಗ ಬಂದ ಲಿಂಕ್ ಕ್ಲಿಕ್ ಮಾಡಿದ ಪರಿಣಾಮ, ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 1.98 ಲಕ್ಷ ರೂಪಾಯಿ ಆನ್ ಲೈನ್ ಮೂಲಕ ಕಳುವಾಗಿರುವ ಬಗ್ಗೆ ದೂರು ದಾಖಲಾಗಿದೆ.
ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣದ ಕೆಂಚಮ್ಮ ನಗರದ ನಿವಾಸಿಯಾದ ಗಂಗಾಧರ ಹೆಚ್. ಎಂಬುವವರೇ ವಂಚನೆಗೊಳಗಾದ ದುರ್ದೈವಿ. ಗಂಗಾಧರ ಅವರು ಇತ್ತೀಚೆಗೆ ತಮ್ಮ ಸಂಬಂಧಿಕರ ಹುಡುಗನಿಗೆ ಆಟವಾಡಲು ಮೊಬೈಲ್ ನೀಡಿದ್ದರು. ಬಾಲಕ ಮೊಬೈಲ್ ನಲ್ಲಿ ಆಟವಾಡುತ್ತಿದ್ದ ಸಮಯದಲ್ಲಿ ಅಪರಿಚಿತರು ಫೇಸ್ ಬುಕ್ ಮೆಸೆಂಜರ್ ಮೂಲಕ ಲಿಂಕ್ ಒಂದನ್ನು ಕಳುಹಿಸಿದ್ದರು.
ಲಿಂಕ್ ನ ಆಮಿಷಕ್ಕೆ ಒಳಗಾದ ಬಾಲಕ ಅದನ್ನು ಓಪನ್ ಮಾಡಿದ್ದಾನೆ. ತಕ್ಷಣವೇ ಮೊಬೈಲ್ ಗೆ ಬಂದ ಒಟಿಪಿ (OTP) ಸಂಖ್ಯೆಯನ್ನು ಅಲ್ಲಿ ನಮೂದಿಸಿದ್ದಾನೆ. ಈ ಒಂದು ಸಣ್ಣ ತಪ್ಪಿನಿಂದಾಗಿ ಗಂಗಾಧರ ಅವರ ಬ್ಯಾಂಕ್ ಖಾತೆಯಿಂದ ತಲಾ 99 ಸಾವಿರ ರೂಪಾಯಿಗಳಂತೆ ಎರಡು ಬಾರಿ ಸೇರಿ ಒಟ್ಟು 1.98 ಲಕ್ಷ ರೂಪಾಯಿ ಹಣ ಅಪರಿಚಿತರ ಖಾತೆಗೆ ವರ್ಗಾವಣೆಯಾಗಿದೆ.
ಬ್ಯಾಂಕ್ ನಿಂದ ಹಣ ಕಡಿತವಾದ ಸಂದೇಶಗಳು ಮೊಬೈಲ್‌ಗೆ ಬಂದಿವೆ. ಆದರೆ, ತಾನು ಮಾಡಿದ ತಪ್ಪಿನಿಂದ ಹಣ ಕಟ್ ಆಗಿದೆ ಎಂಬ ವಿಷಯ ಯಾರಿಗೂ ತಿಳಿಯಬಾರದು ಮತ್ತು ಮನೆಯವರು ಬೈಯಬಹುದು ಎಂಬ ಭಯದಿಂದ ಆ ಬಾಲಕ ಬಂದಿದ್ದ ಒಟಿಪಿ ಹಾಗೂ ಬ್ಯಾಂಕ್ ನ ಎಲ್ಲಾ ಮೆಸೇಜ್ ಗಳನ್ನು ಮೊಬೈಲ್‌ನಿಂದ ಡಿಲೀಟ್ ಮಾಡಿದ್ದಾನೆ.
ನಂತರ ಗಂಗಾಧರ ಅವರು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ಕಡಿತವಾಗಿರುವ ಮಹಾವಂಚನೆ ಬೆಳಕಿಗೆ ಬಂದಿದೆ. ಸದ್ಯ ಈ ಸೈಬರ್ ವಂಚನೆ ಕುರಿತು ಗಂಗಾಧರ್ ಅವರು ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ: ಸೈಬರ್ ವಂಚಕರು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿರುವುದರಿಂದ, ಪೋಷಕರು ಮತ್ತು ಸಾರ್ವಜನಿಕರು ಮಕ್ಕಳ ಕೈಗೆ ಮೊಬೈಲ್ ಕೊಡುವಾಗ ಇಂಟರ್ನೆಟ್ ಬ್ಯಾಂಕಿಂಗ್ ಆಪ್ ಗಳಿಗೆ ಲಾಕ್ ಇಟ್ಟಿರಿ. ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಮಕ್ಕಳಿಗೆ ತಿಳಿಹೇಳಿ. ವಂಚನೆ ನಡೆದ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


