ಸರಗೂರು: “ಹೈಕಮಾಂಡ್ ಕೇಳಿದ್ದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ಅವರು, ಇದೀಗ ಹೈಕಮಾಂಡ್ ಸೂಚನೆಯಂತೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ಮುಂದಾಳತ್ವ ವಹಿಸುವ ಮೂಲಕ ಮತ್ತೊಮ್ಮೆ ತಾವು ‘ನುಡಿದಂತೆ ನಡೆದ ನಾಯಕ’ ಎಂಬುದನ್ನು ಸಾಬೀತುಪಡಿಸಿದ್ದಾರೆ” ಎಂದು ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಹೇಳಿದ್ದಾರೆ. ತಾಲೂಕಿನ ಗಡಿ ಭಾಗದಿಂದ ಆಯ್ಕೆಯಾಗಿರುವ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ನಮ್ಮ ಸರ್ಕಾರದಲ್ಲಿ ಉನ್ನತ ಮಟ್ಟದ ಸಚಿವ ಸ್ಥಾನ ನೀಡಬೇಕು ಎಂದು ಅವರು ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಎಚ್.ಡಿ. ಕೋಟೆ ಮತ್ತು ಸರಗೂರು ಎರಡು ತಾಲೂಕುಗಳು ಎರಡು ಕಣ್ಣುಗಳಿದ್ದಂತೆ. ಅವರು ಯಾವುದೇ ತಾರತಮ್ಯವಿಲ್ಲದೆ ಎರಡು ತಾಲೂಕುಗಳಲ್ಲೂ ನಿರಂತರವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈ ಭಾಗದಲ್ಲಿ ಈ ಹಿಂದೆ ಎನ್. ರಾಜಯ್ಯ ಮತ್ತು ಎಂ. ಶಿವಣ್ಣ ಅವರನ್ನು ಹೊರತುಪಡಿಸಿದರೆ ಬೇರೆ ಯಾರೂ ಸಚಿವರಾಗಿಲ್ಲ. ಆದ್ದರಿಂದ ಸಾರ್ವಜನಿಕರ ಪರವಾಗಿ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪಕ್ಷದ ಹೈಕಮಾಂಡ್ ಅನ್ನು ಒತ್ತಾಯಿಸುತ್ತಿದ್ದೇವೆ” ಎಂದು ತಿಳಿಸಿದರು.
“ನಮ್ಮ ತಾಲೂಕು ಹಿಂದುಳಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬಿಡುಗಡೆಯಾಗಿದೆ. ಸರಗೂರು ತಾಲೂಕು ಭಾಗದಲ್ಲಿ ಮಿನಿ ವಿಧಾನಸೌಧ, 100 ಬೆಡ್ ಆಸ್ಪತ್ರೆ ಹಾಗೂ ಇತರೆ ಕಚೇರಿಗಳ ನಿರ್ಮಾಣಕ್ಕೆ ಅನುದಾನ ದೊರೆತು ಅಭಿವೃದ್ಧಿ ಕೆಲಸಗಳು ಪ್ರಗತಿಯಲ್ಲಿವೆ. ಈ ಭಾಗ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಬೇಕಾದರೆ ಅನಿಲ್ ಚಿಕ್ಕಮಾದು ಅವರಿಗೆ ಸಚಿವ ಸ್ಥಾನ ನೀಡಲೇಬೇಕು” ಎಂದು ಅವರು ಆಗ್ರಹಿಸಿದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


