ಕಲಬುರಗಿ: ಎಮ್ಮೆಯನ್ನು ವಾಪಸ್ ಕರೆತರುವ ಸಲುವಾಗಿ ನದಿಗೆ ಇಳಿದಿದ್ದ ತಂದೆಯೊಬ್ಬರು ಮಗನ ಕಣ್ಣೆದುರೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ವಿಜಯ್ ರಾಜು ಎಂದು ಗುರುತಿಸಲಾಗಿದೆ. ಭೀಮಾ ನದಿಯ ದಡದಲ್ಲಿ ಈ ದುರಂತ ಸಂಭವಿಸಿದೆ.
ವಿಜಯ್ ರಾಜು ಅವರು ತಮ್ಮ ಎಮ್ಮೆಯನ್ನು ವಾಪಸ್ ಕರೆತರಲು ಭೀಮಾ ನದಿಗೆ ಇಳಿದಿದ್ದರು. ಆದರೆ ಅವರಿಗೆ ಸರಿಯಾಗಿ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ನದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನೀರು ಸೊಂಟದ ಮಟ್ಟಕ್ಕಿಂತ ಮೇಲಕ್ಕೆ ಬಂದಿದೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ಅವರು, ಹೊರಬರಲಾರದೆ ಮುಳುಗಲು ಪ್ರಾರಂಭಿಸಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದಾಗ ವಿಜಯ್ ಅವರು “ಕಾಪಾಡಿ, ಕಾಪಾಡಿ” ಎಂದು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ದಡದ ಮೇಲಿದ್ದ ಅವರ ಮಗನಿಗೆ ತಕ್ಷಣವೇ ಏನು ಮಾಡಬೇಕೆಂದು ತೋಚದೆ, ಅಸಹಾಯಕನಾಗಿ ನಿಂತಿದ್ದಾನೆ. ತಂದೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗದ ಆ ತಲ್ಲಣದ ಕ್ಷಣದಲ್ಲಿ, ತಂದೆ ನೀರಿನಲ್ಲಿ ಮುಳುಗುತ್ತಿರುವ ಇಡೀ ದೃಶ್ಯ ಮಗನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈಜು ಬಾರದೇ ಇದ್ದದ್ದು ಮತ್ತು ನೀರಿನ ತೀವ್ರ ಸೆಳೆತ ಪ್ರಾಣಹಾನಿಗೆ ಕಾರಣವಾಗಿದ್ದು, ಕಟ್ಟಿ ಸಂಗಾವಿ ಗ್ರಾಮದಲ್ಲಿ ಸದ್ಯ ಶೋಕದ ವಾತಾವರಣ ನಿರ್ಮಾಣವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


