ಬೆಂಗಳೂರು: ನಾಡಿನ ಪ್ರಮುಖ ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಧರ್ಮಕ್ಷೇತ್ರವಾಗಿರುವ ತುಮಕೂರು ಶ್ರೀ ಸಿದ್ಧಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ನಿವಾಸಗಳಿಗೆ ಭೇಟಿ ನೀಡಿದರು. ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿರುವ ಉಭಯ ನಾಯಕರಿಗೆ ಶ್ರೀಗಳು ವಿಶೇಷ ಆಶೀರ್ವಾದ ಹಾಗೂ ಮಾರ್ಗದರ್ಶನ ನೀಡಿರುವುದು ರಾಜ್ಯದ ರಾಜಕೀಯ ಮತ್ತು ಆಧ್ಯಾತ್ಮಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಮಹತ್ವ ಪಡೆದುಕೊಂಡಿದೆ.
ಮೊದಲು ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದ ಪೂಜ್ಯ ಶ್ರೀಗಳನ್ನು ಮುಖ್ಯಮಂತ್ರಿಯವರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಗೌರವ ಸಲ್ಲಿಸಿದರು. ಶ್ರೀಗಳ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದ ಬಳಿಕ ಕೆಲಕಾಲ ಪ್ರಸ್ತುತ ವಿದ್ಯಮಾನಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀಗಳು, “ಆಡಳಿತದಲ್ಲಿ ನೈತಿಕತೆ, ಪಾರದರ್ಶಕತೆ ಮತ್ತು ಮಾನವೀಯ ಮೌಲ್ಯಗಳ ಪಾಲನೆ ಮುಖ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಸೇವಾ ಮನೋಭಾವದಿಂದ ಮುನ್ನಡೆಯಬೇಕು ಹಾಗೂ ನಾಡಿನ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು” ಎಂದು ಸಿಎಂ ಅವರಿಗೆ ಮಾರ್ಗದರ್ಶನ ನೀಡಿದರು.
ಬಳಿಕ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ನಿವಾಸಕ್ಕೂ ಭೇಟಿ ನೀಡಿದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು, ಜನಪ್ರತಿನಿಧಿಗಳು ಸಾರ್ವಜನಿಕರ ಆಶೋತ್ತರಗಳಿಗೆ ತಕ್ಕಂತೆ ಸ್ಪಂದಿಸಬೇಕು ಎಂದು ಕರೆ ನೀಡಿದರು. “ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ, ಅಭಿವೃದ್ಧಿ ಹಾಗೂ ಸಮಾನತೆಯ ವಾತಾವರಣ ನಿರ್ಮಾಣವಾಗಲಿ” ಎಂದು ಡಿಸಿಎಂ ಅವರಿಗೆ ಆಶೀರ್ವಚನ ನೀಡಿದರು.
ಶ್ರೀಗಳ ಭೇಟಿಯಿಂದ ಧನ್ಯತೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಸಿದ್ಧಗಂಗಾ ಮಠದ ಮಹಾನ್ ಆದರ್ಶಗಳು ಮತ್ತು ಸೇವಾ ಪರಂಪರೆಯನ್ನು ಕೊಂಡಾಡಿದ್ದಲ್ಲದೆ, ಮಠದ ತತ್ವಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


