ಕೂಡ್ಲಿಗಿ: ತಾಲೂಕಾಡಳಿತದ ವತಿಯಿಂದ ಆಯೋಜಿಸುವ ಸಭೆಗಳು ಹಾಗೂ ರಾಷ್ಟ್ರೀಯ ಹಬ್ಬ/ಉತ್ಸವಗಳು ಕೇವಲ ಕಾಟಾಚಾರಕ್ಕೆ ನಡೆಯಬಾರದು. ಅವು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಶಿಷ್ಟಾಚಾರದ ನಿಯಮಗಳಿಗೆ ಅನುಗುಣವಾಗಿ ನಡೆಯಬೇಕು ಎಂದು ವಿವಿಧ ಸಂಘಟನೆಗಳ ಮುಖಂಡರು ತಾಲೂಕಾಡಳಿತವನ್ನು ಆಗ್ರಹಿಸಿದ್ದಾರೆ.
ಆಗಸ್ಟ್ 1 ರಂದು ಕೂಡ್ಲಿಗಿಯ ಪ್ರವಾಸಿ ಮಂದಿರದಲ್ಲಿ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಯಿತು.
ಸಭೆ ಹಾಗೂ ಉತ್ಸವಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವಿನಾಕಾರಣ ಗೈರುಹಾಜರಾಗುವುದು ಅಭ್ಯಾಸವಾಗಿದೆ. ತಾಲೂಕಾಡಳಿತವೇ ಇದಕ್ಕೆ ನೇರ ಹೊಣೆಯಾಗಿದ್ದು, ಗೈರಾಗುವವರ ವಿರುದ್ಧ ಕಾನೂನುರೀತ್ಯ ಶಿಸ್ತು ಕ್ರಮ ಜರುಗಿಸಬೇಕು.
ಸಭೆ ಮತ್ತು ಆಚರಣೆಗಳ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಗಾಳಿಗೆ ತೂರಲಾಗುತ್ತಿದೆ. ವೇದಿಕೆಯಲ್ಲಿ ಜನಪ್ರತಿನಿಧಿಗಳು, ಉನ್ನತಾಧಿಕಾರಿಗಳು ಹಾಗೂ ಅರ್ಹ ಗಣ್ಯರನ್ನು ಹೊರತುಪಡಿಸಿ ಇತರರಿಗೆ ಮಣೆ ಹಾಕಬಾರದು. ವೇದಿಕೆಯ ಗಾಂಭೀರತೆ ಮತ್ತು ಘನತೆಗೆ ಧಕ್ಕೆ ಬರಬಾರದು.
ಉತ್ಸವಗಳು ಮಕ್ಕಳಿಗೆ ಸಂಭ್ರಮ ತರಬೇಕು. ಸಾಂಸ್ಕೃತಿಕ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು.
ಧ್ವಜಾರೋಹಣ ಹಾಗೂ ವೇದಿಕೆ ಕಾರ್ಯಕ್ರಮಗಳಲ್ಲಿ ನಿಯಮ–ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಬಂಧಿಸಿದ ಇಲಾಖೆಗಳು ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು.
ಈ ಸಭೆಯಲ್ಲಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ತಾಪಂ ಅಧಿಕಾರಿ ಟಿ. ನರಸಪ್ಪ, ಬಿಇಒ ಮೈಲೇಶ ಬೇವೂರ್, ಪಿಎಸ್ಐ ಸಿ. ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಅಲ್ಲದೆ, ಕನ್ನಡ ಪರ, ರೈತರ, ಮಹಿಳಾ, ದಲಿತ, ಕಾರ್ಮಿಕ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ವರದಿ: ವಿ.ಜಿ.ವೃಷಭೇಂದ್ರ, ಕೂಡ್ಲಿಗಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
