ಗುಜರಾತ್: ಏಕ್ತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಂದನವನದ ಎವರ್ ಗ್ರೀನ್ ಸ್ಟಾರ್, ಹಿರಿಯ ನಟ ಅನಂತ್ ನಾಗ್ ಅವರು 2024ನೇ ಸಾಲಿನ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಯನ್ನು ಸ್ವೀಕರಿಸಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಅವರು ನೀಡಿರುವ ಸುದೀರ್ಘ ಕೊಡುಗೆ ಹಾಗೂ 5 ದಶಕಗಳ ವಿಶಿಷ್ಟ ವೃತ್ತಿಜೀವನವನ್ನು ಗುರುತಿಸಿ ದೇಶದ ಈ ಅತ್ಯುನ್ನತ ಸಿನಿಮಾ ಗೌರವವನ್ನು ನೀಡಿ ಗೌರವಿಸಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಮಾರಂಭದಲ್ಲಿ ಈ ಅತ್ಯುನ್ನತ ಪ್ರಶಸ್ತಿಯನ್ನು ನಟ ಅನಂತ್ ನಾಗ್ ಅವರಿಗೆ ಪ್ರದಾನ ಮಾಡಿದರು. ಈ ಐತಿಹಾಸಿಕ ಕ್ಷಣದಲ್ಲಿ ದೇಶದ ವಿವಿಧ ಭಾಷಾ ಚಿತ್ರರಂಗಗಳ ಗಣ್ಯರು ಉಪಸ್ಥಿತರಿದ್ದು ಸಂಭ್ರಮಿಸಿದರು.
1948ರ ಸೆಪ್ಟೆಂಬರ್ 4ರಂದು ಜನಿಸಿದ ಅನಂತ್ ನಾಗ್ (ಅನಂತ್ ನಾಗರಕಟ್ಟೆ) ಅವರು ಕಳೆದ ಐದು ದಶಕಗಳಿಂದಲೂ ಭಾರತೀಯ ಮನರಂಜನಾ ಕ್ಷೇತ್ರಕ್ಕೆ ತಮ್ಮ ಅತುಲ್ಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಮರಾಠಿ ಸೇರಿದಂತೆ ವಿವಿಧ ಭಾಷೆಗಳ 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ತಮ್ಮ 78ರ ಹರೆಯದಲ್ಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ರಂಗಭೂಮಿಯಿಂದ ತಮ್ಮ ನಟನಾ ಪಯಣ ಆರಂಭಿಸಿದ ಅವರು, ‘ಮಾಲ್ಗುಡಿ ಡೇಸ್’ ನಂತಹ ಜನಪ್ರಿಯ ಧಾರಾವಾಹಿಯ ಮೂಲಕ ಕಿರುತೆರೆಯಲ್ಲೂ ತಮ್ಮ ಅಮೋಘ ಛಂಪು ಮೂಡಿಸಿದ್ದರು. 1973ರಲ್ಲಿ ‘ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅವರು, 2023ಕ್ಕೆ ಚಿತ್ರರಂಗದಲ್ಲಿ ಯಶಸ್ವಿ 50 ವರ್ಷಗಳನ್ನು ಪೂರೈಸಿದ್ದಾರೆ.
ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರು ಈಗಾಗಲೇ ಹಲವಾರು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ನಟ ವಿಭಾಗದಲ್ಲಿ 5 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 5 ಫಿಲ್ಮ್ಫೇರ್ ಪ್ರಶಸ್ತಿಗಳು ಮತ್ತು 2025ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ ಗೌರವಕ್ಕೂ ಇವರು ಪಾತ್ರರಾಗಿದ್ದಾರೆ. ಇದರೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರ ಕಿರೀಟಕ್ಕೆೆ ಇವೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ತಮ್ಮ ಸಂತಸ ಹಂಚಿಕೊಂಡಿರುವ ನಟ ಅನಂತ್ ನಾಗ್, “ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿ ಸಿಕ್ಕಿತ್ತು, ಈ ವರ್ಷ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿರುವುದು ಬಹಳ ಖುಷಿಯಾಗುತ್ತಿದೆ. ಈ ಅತ್ಯುನ್ನತ ಗೌರವವನ್ನು ನಾನು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಅರ್ಪಿಸುತ್ತೇನೆ” ಎಂದು ತಿಳಿಸಿದ್ದಾರೆ. ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ನಾಡಿನಾದ್ಯಂತ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಅಭಿನಂದನೆಗಳ ಸುರಿಮಳೆಗೈಯಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
