ನವದೆಹಲಿ: ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸ್ಥಾಪಕ ಅಭಿಜಿತ್ ದೀಪ್ಕೆ ಅವರಿಗೆ ಪೊಲೀಸ್ ವಶದಲ್ಲಿದ್ದಾಗ ಅವರ ಅಜ್ಜಿಯ ನಿಧನದ ದುಃಖಕರ ಸುದ್ದಿಯನ್ನು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸುತ್ತಿರುವ ವೀಡಿಯೊ ದೆಹಲಿ ಪೊಲೀಸರಿಂದ ಬಿಡುಗಡೆಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಿಜೆಪಿ (CJP) ನಾಯಕರು ಮತ್ತು ಬೆಂಬಲಿಗರು ಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ದೆಹಲಿಗೆ ಬಂದಿಳಿದ ಅಭಿಜಿತ್ ದೀಪ್ಕೆ, ಅಶುತೋಷ್ ರಂಕಾ ಹಾಗೂ ಸೌರವ್ ದಾಸ್ ಸೇರಿದಂತೆ ಸುಮಾರು 3,000ಕ್ಕೂ ಅಧಿಕ ಸಿಜೆಪಿ ಬೆಂಬಲಿಗರನ್ನು ದೆಹಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದರು.
ಪೊಲೀಸ್ ವಶದಲ್ಲಿದ್ದ ಸಮಯದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅಭಿಜಿತ್ ದೀಪ್ಕೆ ಬಳಿ ಬಂದು, “ಸರ್, ನಾನು ಒಂದು ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತೇನೆ… ಇದು ದುರದೃಷ್ಟಕರ ಸುದ್ದಿ… ಇದಕ್ಕಾಗಿ ನಾವು ವಿಷಾದಿಸುತ್ತೇವೆ. ನಿಮ್ಮ ಅಜ್ಜಿ ನಿಧನರಾಗಿದ್ದಾರೆ” ಎಂದು ತಿಳಿಸಿದ್ದಾರೆ.
ಈ ದಿಢೀರ್ ಸುದ್ದಿಯಿಂದ ತೀವ್ರ ನೊಂದ ದೀಪ್ಕೆ, ತಮ್ಮ ತಗ್ಗಿಸಿದ ತಲೆಯ ಮೇಲೆ ಎರಡೂ ಕೈಗಳನ್ನು ಇಟ್ಟುಕೊಂಡು ಕೆಲವು ಕ್ಷಣಗಳ ಕಾಲ ಮೌನ ವಹಿಸಿದ್ದರು. ನಂತರ “ಸರಿ, ಅರ್ಥವಾಯಿತು” ಎಂದರು. ಈ ವೇಳೆ ಪುರುಷ ಅಧಿಕಾರಿಯೊಬ್ಬರು ಮಧ್ಯಪ್ರವೇಶಿಸಿ, “ನಿಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಯಸಿದರೆ, ನಾವು ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆ” ಎಂದು ತಿಳಿಸಿದರು. ಆದರೆ ದೀಪ್ಕೆ ತಮಗೆ ಯಾವುದೇ ಫೋನ್ ಸಂಖ್ಯೆಗಳು ನೆನಪಿಲ್ಲ ಎಂದು ಹೇಳಿ, ತಾವು ಇಲ್ಲೇ ಉಳಿಯುವುದಾಗಿ ತಿಳಿಸಿದ್ದರು.
ಅಜ್ಜಿಯ ಸಾವಿನ ಬಗ್ಗೆ ತಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬ ಆರೋಪಗಳನ್ನು ತಳ್ಳಿಹಾಕಲು ದೆಹಲಿ ಪೊಲೀಸರು ಈ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಸೂಕ್ತ ಸಂವೇದನೆಯೊಂದಿಗೆ ಸುದ್ದಿ ತಿಳಿಸಿ, ಊರಿಗೆ ತೆರಳಲು ಸಾರಿಗೆ ವ್ಯವಸ್ಥೆಯ ಪ್ರಸ್ತಾಪವನ್ನೂ ಮಾಡಲಾಗಿತ್ತು ಆದರೆ ಅವರು ಅದನ್ನು ನಿರಾಕರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಂದೆಡೆ, ಈ ಕುರಿತು ‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಭಿಜಿತ್ ದೀಪ್ಕೆ, “ನನ್ನ ಅಜ್ಜಿಯೊಂದಿಗೆ ವಾಸಿಸುತ್ತಿದ್ದ ಸೋದರಸಂಬಂಧಿಯೊಂದಿಗೆ ಮಾತನಾಡಲು ಅಥವಾ ಕನಿಷ್ಠಪಕ್ಷ ಫೋನ್ ಮಾಡಲು ಪೊಲೀಸರು ಅವಕಾಶ ನೀಡಲಿಲ್ಲ. ವಕೀಲರನ್ನು ಸಂಪರ್ಕಿಸುವುದಕ್ಕೂ ಬಿಡಲಿಲ್ಲ. ಬೆಳಿಗ್ಗೆ 3:30ರ ಸುಮಾರಿಗೆ ನನ್ನ ತಂದೆಗೆ ಕರೆ ಮಾಡಿ ಜೈಲಿಗೆ ಹೋಗುತ್ತಿದ್ದೇನೆ ಎಂದು ತಿಳಿಸುವಂತೆ ಪೊಲೀಸರು ಒತ್ತಾಯಿಸಿದರು. ಆಗಷ್ಟೇ ತಾಯಿಯನ್ನು ಕಳೆದುಕೊಂಡಿದ್ದ ತಂದೆಗೆ ಮತ್ತಷ್ಟು ಆಘಾತ ನೀಡಲು ಬಯಸುತ್ತೀರಾ?” ಎಂದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ನಂತರ ಪೊಲೀಸ್ ವಶದಿಂದ ಬಿಡುಗಡೆಗೊಂಡ ಅಭಿಜಿತ್ ದೀಪ್ಕೆ, ತಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಹಾರಾಷ್ಟ್ರದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ತಾವು ಹಾಗೂ ತಮ್ಮ ಪಕ್ಷ CJP ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ದೃಢಸಂಕಲ್ಪ ವ್ಯಕ್ತಪಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
