
ಸಂಪಾದಕರು, ನಮ್ಮ ತುಮಕೂರು ಡಿಜಿಟಲ್ ಸುದ್ದಿ ಮಾಧ್ಯಮ
ಕೇಂದ್ರ ಸರ್ಕಾರದ ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) 2026ರ ಅಕ್ಟೋಬರ್ 13ರಂದು ಮಹತ್ವದ ಅಧಿಕೃತ ಸುತ್ತೋಲೆಯನ್ನು (ಸಂಖ್ಯೆ: Compliance/AnnAcPlan/2022-23/RationalizationofECR-Part(1)/e-704368) ಹೊರಡಿಸಿದ್ದು, ಸೆಪ್ಟೆಂಬರ್ 2026ರ ವೇತನ ತಿಂಗಳ ಇ-ಚಲನ್ ಕಮ್ ರಿಟರ್ನ್ (ECR) ಸಲ್ಲಿಕೆ ಹಾಗೂ ಶಾಸನಬದ್ಧ ವಂತಿಗೆ ಪಾವತಿಯ ಕೊನೆಯ ದಿನಾಂಕವನ್ನು ಅಕ್ಟೋಬರ್ 15ರಿಂದ ಅಕ್ಟೋಬರ್ 31ರವರೆಗೆ ವಿಸ್ತರಿಸಿದೆ.
ಸರ್ಕಾರದ ನೀತಿ ನಿಯಮಗಳು ಎಷ್ಟೇ ಪ್ರಗತಿಪರವಾಗಿದ್ದರೂ, ಅವುಗಳನ್ನು ಅನುಷ್ಠಾನಕ್ಕೆ ತರುವಾಗ ನೆಲಮಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಅರಿತು ತೀರ್ಮಾನ ಕೈಗೊಳ್ಳುವುದು ಆಡಳಿತ ಯಂತ್ರದ ಪ್ರಬುದ್ಧತೆಗೆ ಸಾಕ್ಷಿ. ಆ ನಿಟ್ಟಿನಲ್ಲಿ ಇಪಿಎಫ್ ಒ ತೆಗೆದುಕೊಂಡಿರುವ ಈ ಕ್ರಮ ಪ್ರಾಯೋಗಿಕ ಹಾಗೂ ಸ್ವಾಗತಾರ್ಹ.
ಸಾಮಾಜಿಕ ಭದ್ರತಾ ಸಂಹಿತೆ 2020ರ ಅಡಿಯಲ್ಲಿ ದಿನಾಂಕ 17.09.2026 ರಿಂದ ಜಾರಿಗೆ ಬರುವಂತೆ ವೇತನ ಮಿತಿಯನ್ನು (Wage ceiling limit) ಪರಿಷ್ಕರಿಸಲಾಗಿತ್ತು. ಆದರೆ, ತಿಂಗಳ ಅರ್ಧಭಾಗ ಕಳೆದ ನಂತರ ನಿಯಮ ಜಾರಿಗೆ ಬಂದಿದ್ದರಿಂದ ಉದ್ಯೋಗದಾತರು ತಮ್ಮ ಪೇರೋಲ್ ಸಾಫ್ಟ್ ವೇರ್, ಉದ್ಯೋಗಿಗಳ ವಂತಿಗೆ ಲೆಕ್ಕಾಚಾರ ಮತ್ತು ಮಾಸಿಕ ಬಿಲ್ ಗಳಲ್ಲಿ ತಕ್ಷಣಕ್ಕೆ ತಾಂತ್ರಿಕ ಹೊಂದಾಣಿಕೆ ಮಾಡಿಕೊಳ್ಳಲು ಹರಸಾಹಸ ಪಡುವಂತಾಯಿತು. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಗುತ್ತಿಗೆ ಸೇವಾ ಸಂಸ್ಥೆಗಳು ಹಾಗೂ ಮಾನವಸಂಪನ್ಮೂಲ ನಿರ್ವಹಣಾ ಸಂಸ್ಥೆಗಳಿಗೆ ನಿಯಮಿತ 15 ದಿನಗಳ ಗಡುವಿನಲ್ಲಿ ಇಸಿಆರ್ ಸಿದ್ಧಪಡಿಸುವುದು ದೊಡ್ಡ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕಾಗಿ ಪರಿಣಮಿಸಿತ್ತು.
ಉದ್ಯೋಗದಾತರು ಮತ್ತು ವಿವಿಧ ಪಾಲುದಾರರು ಎದುರಿಸುತ್ತಿದ್ದ ಈ ನೈಜ ಸಂಕಷ್ಟವನ್ನು ಪರಿಗಣಿಸಿ, ನೌಕರರ ಭವಿಷ್ಯ ನಿಧಿ ಯೋಜನೆ 1952 ರ ಪ್ಯಾರಾ 28(3) ರ ಅನ್ವಯ ಕೇಂದ್ರ ಭವಿಷ್ಯ ನಿಧಿ ಆಯುಕ್ತರ (CPFC) ಅನುಮೋದನೆಯೊಂದಿಗೆ ಈ ಗಡುವನ್ನು ವಿಸ್ತರಿಸಲಾಗಿದೆ. ಯಾವುದೇ ದಂಡ ಅಥವಾ ವಿಳಂಬ ಶುಲ್ಕದ ಆತಂಕವಿಲ್ಲದೆ ಸಲ್ಲಿಕೆ ಮಾಡಲು ಕಾಲಾವಕಾಶ ಒದಗಿಸಿರುವುದು ‘ವ್ಯಾಪಾರ–ವಹಿವಾಟು ನಡೆಸುವ ಸುಲಭತೆ’ಗೆ (Ease of Doing Business) ಪೂರಕವಾದ ನಿಲುವಾಗಿದೆ.
ಅದೇ ಸಮಯದಲ್ಲಿ, ಇಂತಹ ಬೃಹತ್ ನಿಯಮ ಬದಲಾವಣೆಗಳನ್ನು ಘೋಷಿಸುವಾಗ ಇಲಾಖೆಗಳು ಮುಂಚಿತವಾಗಿಯೇ ತಾಂತ್ರಿಕ ಸಿದ್ಧತೆ ಮತ್ತು ಪರಿವರ್ತನಾ ಕಾಲಾವಕಾಶವನ್ನು (Transition Period) ನೀಡುವ ದೂರದೃಷ್ಟಿ ಬೆಳೆಸಿಕೊಳ್ಳಬೇಕಿರುವುದು ಅಗತ್ಯ. ಕೊನೆಯ ಕ್ಷಣದಲ್ಲಿ ಗಡುವು ವಿಸ್ತರಿಸುವ ಬದಲು, ಆರಂಭದಲ್ಲೇ ಸ್ಪಷ್ಟ ಕಾರ್ಯವಿಧಾನ ರೂಪಿಸುವುದು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ.
ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿರುವಂತೆ, ಈ ವಿನಾಯಿತಿಯು ಕೇವಲ ಸೆಪ್ಟೆಂಬರ್ 2026 ರ ವೇತನ ಸಲ್ಲಿಕೆಗೆ ಮಾತ್ರ ಸೀಮಿತವಾಗಿದೆ. ಸಿಕ್ಕಿರುವ ಈ ಹೆಚ್ಚುವರಿ ಅವಧಿಯನ್ನು ಉದ್ಯೋಗದಾತರು ಸಮರ್ಥವಾಗಿ ಬಳಸಿಕೊಂಡು, ಯಾವುದೇ ತಾಂತ್ರಿಕ ಲೋಪಗಳಿಲ್ಲದೆ ಅಕ್ಟೋಬರ್ 31ರ ಒಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಶಾಸನಬದ್ಧ ಕರ್ತವ್ಯವನ್ನು ನಿಭಾಯಿಸಬೇಕಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
