ತುಮಕೂರು: ಪಾಲಿಕೆಯಲ್ಲಿ ಡಿಸಿ ಆಡ್ಮಿನ್ ಆಗಿರುವ ಎಸಿ ಕೋರ್ಟ್ನ ವಿಶೇಷ ಉಪವಿಭಾಗಾಧಿಕಾರಿ ಸುಪ್ರಿಯಾ ಬಣಕಾರ್ ಅವರ ಹೆಸರಿನಲ್ಲಿ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬಲೆಗೆ ಬಿದ್ದವರನ್ನು ಆಧೀನ ಸಿಬ್ಬಂದಿಗಳಾದ ಪ್ರಥಮದರ್ಜೆ ಸಹಾಯಕಿ ವೀಣಾ ಹಾಗೂ ಅನಧಿಕೃತ ಸಹಾಯಕ ಉಮೇಶ್ ಎಂದು ಗುರುತಿಸಲಾಗಿದ್ದು, ಪಾಲಿಕೆ ಆವರಣದಲ್ಲಿ ಶುಕ್ರವಾರ ಸಂಜೆ 5.45ರ ಸಮಯದಲ್ಲಿ 50 ಸಾವಿರ ಲಂಚ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣ ಹಿನ್ನೆಲೆ: ತುಮಕೂರು ತಾಲೂಕು ಕೋರಾ ಹೋಬಳಿ ಕಲ್ಲುಕಂಟೆಯ ಪುಟ್ಟಮ್ಮ ನವರಿಗೆ ಸೇರಿದ ಸರ್ವೇ ನಂ.14/3ಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಗಂಗರಾಜು ಅವರ ಹೆಸರಿಗೆ ಖಾತೆ ಮಾಡಿ ಕೊಡಲು ಆದೇಶವಾಗಿತ್ತು. ಸದರಿ ಆದೇಶದ ವಿರುದ್ಧ ಪುಟ್ಟಮ್ಮ ಕುಟುಂಬಸ್ಥರು ವಿಶೇಷ ಎಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿ ಆದೇಶ ಹೊರಡಿಸುವ ಸಂಬಂಧ ಅರ್ಜಿದಾರರ ಬಳಿ 50000 ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಅದನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದ್ದು, ಇದರಲ್ಲಿ ಸುಪ್ರಿಯಾ ಅವರ ಪಾತ್ರವೇನು ಎಂಬ ಬಗ್ಗೆಯೂ ತನಿಖೆಗೊಳಪಡಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ.
ದಾಳಿಯನ್ನು ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿಗಳ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರುಗಳಾದ ನಿರ್ಮಲ ಎ., ರಾಜು ಟಿ. ರಾಘವೇಂದ್ರ ಜಿ.ಕೆ ಹಾಗೂ ಸುನೀಲ್ ಕುಮಾರ್ ಎಚ್.ಎಸ್, ಸಿಬ್ಬಂದಿ ಕೈಗೊಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
