ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ನೇಮಕಾತಿ ಅವಕಾಶ ಕಲ್ಪಿಸಿದೆ. ಸಂಸ್ಥೆಯ ದೇಶಾದ್ಯಂತದ ಒಂಬತ್ತು ಉತ್ಪಾದನಾ ಘಟಕಗಳಲ್ಲಿ ಖಾಲಿ ಇರುವ 660 ಕುಶಲಕರ್ಮಿ ಗ್ರೇಡ್-4 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಫಿಟ್ಟರ್, ವೆಲ್ಡರ್, ಟರ್ನರ್, ಮೆಷಿನಿಸ್ಟ್ ಸೇರಿದಂತೆ ಏಳು ವಿವಿಧ ಟ್ರೇಡ್‌ಗಳಲ್ಲಿ ನೇಮಕಾತಿ ನಡೆಯಲಿದೆ.
ಬಿಎಚ್ ಇಎಲ್ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 21, 2026ರಂದು ಆರಂಭವಾಗಿದೆ. ಅರ್ಜಿ ಸಲ್ಲಿಸಲು ನವೆಂಬರ್ 18, 2026ರ ರಾತ್ರಿ 11.45ರವರೆಗೆ ಅವಕಾಶವಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBT) ಡಿಸೆಂಬರ್ 11, 2026ರಂದು ತಾತ್ಕಾಲಿಕವಾಗಿ ನಡೆಸಲು ನಿರ್ಧರಿಸಲಾಗಿದೆ.
ಯಾವ ವಿಭಾಗದಲ್ಲಿ ಎಷ್ಟು ಹುದ್ದೆಗಳಿವೆ?
ಒಟ್ಟು 660 ಹುದ್ದೆಗಳ ಪೈಕಿ ಫಿಟ್ಟರ್ ವಿಭಾಗದಲ್ಲಿ 278 ಹುದ್ದೆಗಳಿದ್ದು, ಅತಿ ಹೆಚ್ಚು ಅವಕಾಶಗಳಿವೆ. ವೆಲ್ಡರ್ ವಿಭಾಗದಲ್ಲಿ 104, ಮೆಷಿನಿಸ್ಟ್ ವಿಭಾಗದಲ್ಲಿ 101, ಎಲೆಕ್ಟ್ರಿಷಿಯನ್ ವಿಭಾಗದಲ್ಲಿ 90, ಟರ್ನರ್ ವಿಭಾಗದಲ್ಲಿ 52, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ ವಿಭಾಗದಲ್ಲಿ 23 ಹಾಗೂ ಫೌಂಡ್ರಿಮ್ಯಾನ್ ವಿಭಾಗದಲ್ಲಿ 12 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC/ITI) ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (NAC) ಹೊಂದಿರಬೇಕು. ಕನಿಷ್ಠ ಅಂಕಗಳು ಸೇರಿದಂತೆ ಇತರ ಅರ್ಹತಾ ಮಾನದಂಡಗಳು ಟ್ರೇಡ್‌ಗೆ ಅನುಗುಣವಾಗಿ ಬದಲಾಗಬಹುದು. ಹೀಗಾಗಿ ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಅಗತ್ಯ.
ಅಭ್ಯರ್ಥಿಗಳ ಆಯ್ಕೆಗೆ ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಅಧಿಸೂಚನೆಯಲ್ಲಿ ಸೂಚಿಸಿರುವ ನಿಯಮಗಳ ಪ್ರಕಾರ ದಾಖಲೆಗಳ ಪರಿಶೀಲನೆ ಮತ್ತು ಕೌಶಲ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ವಯೋಮಿತಿ, ಅರ್ಜಿ ಶುಲ್ಕ, ವಯೋಮಿತಿ ಸಡಿಲಿಕೆ ಹಾಗೂ ಪರೀಕ್ಷೆಯ ಕುರಿತಾದ ಸಂಪೂರ್ಣ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ತಿಳಿದುಕೊಳ್ಳಬಹುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬಿಎಚ್ ಇಎಲ್ ನ ಅಧಿಕೃತ ನೇಮಕಾತಿ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯೊಬ್ಬರು ಕೇವಲ ಒಂದು ಉತ್ಪಾದನಾ ಘಟಕ ಮತ್ತು ಒಂದು ಟ್ರೇಡ್‌ಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದ್ದರಿಂದ ತಮಗೆ ಸೂಕ್ತವಾದ ಘಟಕ ಹಾಗೂ ಟ್ರೇಡ್ ಆಯ್ಕೆ ಮಾಡಿಕೊಂಡು, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.
ಹೆಚ್ಚಿನ ಮಾಹಿತಿಗಾಗಿ ಬಿಎಚ್ ಇಎಲ್ ನ ಅಧಿಕೃತ ವೆಬ್ ಸೈಟ್ ನಲ್ಲಿರುವ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
