ತುಮಕೂರು: ತುಮಕೂರಿನ ಶಿರಾಗೇಟ್ ಮುಖ್ಯರಸ್ತೆಯಲ್ಲಿ ಹಬ್ಬದ ನಂತರ ಅನಾಥವಾಗಿ ಬಿದ್ದಿದ್ದ ಕೊಳೆತ ಬೂದುಗುಂಬಳಕಾಯಿಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಅನುಭವಿಸುತ್ತಿದ್ದ ಗೋಳಿನ ಕುರಿತು ‘ನಮ್ಮತುಮಕೂರು’ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಬೆನ್ನಲ್ಲೇ, ಎಚ್ಚೆತ್ತುಕೊಂಡಿರುವ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತವು ತುರ್ತು ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಬಿದ್ದಿದ್ದ ಕಸವನ್ನು ಸಂಪೂರ್ಣವಾಗಿ ತೆರವುಗೊಳಿಸಿದೆ.
ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಶಿರಾಗೇಟ್ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿದ್ದ ಕೆಲವರು, ಮಾರಾಟವಾಗದೆ ಉಳಿದಿದ್ದ ನೂರಾರು ಬೂದುಗುಂಬಳಕಾಯಿಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗಿದ್ದರು. ಬಿಸಿಲಿನ ಬೇಗೆಗೆ ಇವು ಸಂಪೂರ್ಣವಾಗಿ ಕೊಳೆತು ಗಬ್ಬು ನಾರುತ್ತಿದ್ದು, ರಸ್ತೆಯುದ್ದಕ್ಕೂ ಜಿಡ್ಡಿನ ದ್ರವ ಹರಡಿಕೊಂಡಿತ್ತು. ಇದರಿಂದ ಪಾದಚಾರಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ರಾತ್ರಿ ವೇಳೆ ಬರುವ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಸಣ್ಣಪುಟ್ಟ ಅಪಘಾತಗಳಿಗೂ ತುತ್ತಾಗುತ್ತಿದ್ದರು. ಈ ಕುರಿತು ‘ನಮ್ಮತುಮಕೂರು’ ವಿಸ್ತೃತ ವರದಿಯನ್ನು ಪ್ರಕಟಿಸಿ ಆಡಳಿತ ಯಂತ್ರದ ಗಮನ ಸೆಳೆದಿತ್ತು.
ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಗಂಭೀರವಾಗಿ ಪರಿಗಣಿಸಿದ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಕೂಡಲೇ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಕಾರ್ಮಿಕರು ಮತ್ತು ವಾಹನಗಳ ಸಹಾಯದಿಂದ ರಸ್ತೆ ಬದಿ ಕೊಳೆತು ಬಿದ್ದಿದ್ದ ಬೂದುಗುಂಬಳಕಾಯಿಗಳ ರಾಶಿಯನ್ನು ತೆರವುಗೊಳಿಸಿದ್ದಾರೆ.
ಮಾಧ್ಯಮದ ಧ್ವನಿಗೆ ಸ್ಪಂದಿಸಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಜನರ ಸಮಸ್ಯೆಯನ್ನು ಬಗೆಹರಿಸಿರುವ ಪಾಲಿಕೆ ಅಧಿಕಾರಿಗಳು ಹಾಗೂ ‘ನಮ್ಮತುಮಕೂರು’ ಮಾಧ್ಯಮದ ಕಾಳಜಿಗೆ ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು ಹಾಗೂ ವಾಹನ ಸವಾರರು ಧನ್ಯವಾದ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಬ್ಬಗಳ ಹೆಸರಿನಲ್ಲಿ ರಸ್ತೆಗಳನ್ನು ಗಬ್ಬೆಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನಗರದ ಸ್ವಚ್ಛತೆಯನ್ನು ನಿರಂತರವಾಗಿ ಕಾಪಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
