ತುಮಕೂರು : ನಗರದ ಹೊರಪೇಟೆಯಲ್ಲಿರುವ ಕರಿಬಸವೇಶ್ವರಸ್ವಾಮಿ ಮಠದ ಪೀಠಾಧಿಪತಿ ನೇಮಕ ವಿಚಾರವಾಗಿ ಉಂಟಾಗಿರುವ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಮಠ ಪ್ರವೇಶಿಸಲು ಮುಂದಾದ ಮುನಿರಾಬಾದ್ ಬಾಲಯೋಗಿ ಮಧು ಮಾಯಾನಂದ ಸ್ವಾಮೀಜಿ ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ತಡೆದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಉರವಕೊಂಡ ಪಟ್ಟಣದ ಉರಗಾದ್ರಿ ಗವಿಮಠ ಮಹಾಸಂಸ್ಥಾನದ ಶಾಖಾ ಮಠವಾಗಿರುವ ಕರಿ ಬಸವೇಶ್ವರ ಸ್ವಾಮಿ ಮಠಕ್ಕೆ ತಾವೇ ವಾರಸುದಾರರು ಹಾಗೂ ಪೀಠಾಧಿಪತ್ಯದ ಹಕ್ಕುದಾರರು ಎಂದು ಮಧು ಮಾಯಾನಂದ ಸ್ವಾಮೀಜಿ ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಮಠ ಪ್ರವೇಶಿಸಲು ಮುಂದಾದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಮಠ ಪ್ರವೇಶಕ್ಕೆ ಅವಕಾಶ ನಿರಾಕರಿಸಿದರು. ನ್ಯಾಯಾಲಯದ ಆದೇಶವಿದ್ದರೆ ಹಾಜರುಪಡಿಸುವಂತೆ ಸರ್ಕಲ್ ಇನ್ಸ್ಪೆಕ್ಟರ್ ಅವಿನಾಶ್ ಸೂಚಿಸಿ, ನ್ಯಾಯಾಲಯದ ಆದೇಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇದರಿಂದ ಸ್ವಾಮೀಜಿ ಬೆಂಬಲಿಗರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಮಧು ಮಾಯಾನಂದ ಸ್ವಾಮೀಜಿ ಪರವಾಗಿ ಬಂದಿದ್ದ ಕೆಆರ್ಎಸ್ ಪಕ್ಷದ ಮಹಿಳಾ ಕಾರ್ಯಕರ್ತರು ಹಾಗೂ ಕೃಷ್ಣ ದರ್ಶನ ಸ್ವಾಮೀಜಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಮಠ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ನೂಕುನುಗ್ಗಲು ಉಂಟಾಯಿತು.
ವಿಲ್ ವಿಚಾರವೇ ವಿವಾದದ ಕೇಂದ್ರ
ಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಶ್ರೀ ಚನ್ನಬಸವ ರಾಜೇಂದ್ರ ಸ್ವಾಮೀಜಿ ಅವರ ನಿಧನದ ಬಳಿಕ ಭಕ್ತರು ಡಾ. ಕರಿಬಸವ ರಾಜೇಂದ್ರ ಸ್ವಾಮೀಜಿ ಅವರನ್ನು ನೂತನ ಪೀಠಾಧಿಪತಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ಹಿಂದಿನ ಪೀಠಾಧ್ಯಕ್ಷರು ತಮ್ಮ ಹೆಸರಿಗೆ ವಿಲ್ ಬರೆದಿದ್ದಾರೆ ಎಂದು ಹೇಳುತ್ತಿರುವ ಮಧು ಮಾಯಾನಂದ ಸ್ವಾಮೀಜಿ, ಮಠದ ಅಧಿಕೃತ ಪೀಠಾಧಿಪತಿ ತಾನೇ ಎಂದು ಹಕ್ಕು ಮಂಡಿಸುತ್ತಿದ್ದಾರೆ.
ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಗೂ ದೂರು ಸಲ್ಲಿಸಿದ್ದಾರೆ. ಪೀಠಾಧಿಪತ್ಯದ ಹಕ್ಕಿನ ಜೊತೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಾಣಿಜ್ಯ ಕಟ್ಟಡಗಳು, ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಾಲಯ ಸೇರಿದಂತೆ ಮಠಕ್ಕೆ ಸಂಬಂಧಿಸಿದ ವಿವಿಧ ಆಸ್ತಿಗಳ ಹಕ್ಕು ಮತ್ತು ನಿರ್ವಹಣೆ ವಿಚಾರವೂ ವಿವಾದಕ್ಕೆ ಕಾರಣವಾಗಿದೆ.
ವಿವಾದದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಮಠದ ಪ್ರವೇಶ ದ್ವಾರದಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದು, ಈಗಾಗಲೇ ಪೀಠಾಧಿಪತಿಯಾಗಿ ನೇಮಕಗೊಂಡಿರುವ ಡಾ. ಕರಿಬಸವ ರಾಜೇಂದ್ರ ಸ್ವಾಮೀಜಿ ಮಠದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಒಟ್ಟಾರೆ, ಮಠದ ಪೀಠಾಧಿಪತ್ಯ ಹಾಗೂ ಆಸ್ತಿಗಳ ಹಕ್ಕಿನ ಕುರಿತ ವಿವಾದಕ್ಕೆ ನ್ಯಾಯಾಲಯದ ಮೂಲಕ ಪರಿಹಾರ ದೊರೆಯಬೇಕಿದೆ. ಮುಂದಿನ ದಿನಗಳಲ್ಲಿ ಈ ಬೆಳವಣಿಗೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
