ಮಧುಗಿರಿ : ಮನುಷ್ಯನು ಸ್ವಾರ್ಥವನ್ನು ತೊರೆದು ಸಮಾಜದ ಒಳಿತಿಗಾಗಿ ಬದುಕಿದಾಗ ಮಾತ್ರ ನಿಜವಾದ ಪುಣ್ಯ ಸಂಪಾದನೆ ಹಾಗೂ ಮೋಕ್ಷ ಪ್ರಾಪ್ತಿಯಾಗಲು ಸಾಧ್ಯ. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮ ರಕ್ಷಣೆಗೆ ನಿಲ್ಲುತ್ತದೆ ಎಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಬಡಿಗೊಂಡನಹಳ್ಳಿಯಲ್ಲಿ ಆಯೋಜಿಸಿದ್ದ ಶ್ರೀ ಲಿಂಗೇಶ್ವರ ಸ್ವಾಮಿ ಹಾಗೂ ಹಟ್ಟಿ ಮಾರಮ್ಮ ದೇವರ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಸ್ವಾರ್ಥಕ್ಕಾಗಿ ಸಮಾಜದಲ್ಲಿ ಬದುಕಿದವರು ಕಾಲಕ್ರಮೇಣ ತಮ್ಮ ಹೆಸರನ್ನೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ನಿಸ್ವಾರ್ಥ ಮನೋಭಾವದಿಂದ ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸಿದವರ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿದೆ. ಪರೋಪಕಾರ, ಸಮಾಜಸೇವೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರೂ ಸಾರ್ಥಕ ಜೀವನ ನಡೆಸಬೇಕು ಎಂದರು.
ಸನಾತನ ಧರ್ಮದಲ್ಲಿ ಪುಣ್ಯ ಸಂಪಾದನೆ ಹಾಗೂ ಮೋಕ್ಷ ಪ್ರಾಪ್ತಿಗಾಗಿ ಹಲವು ಸರಳ ಮಾರ್ಗಗಳನ್ನು ತಿಳಿಸಲಾಗಿದೆ. ದಾನ, ಧರ್ಮ, ನೊಂದವರಿಗೆ ಆಸರೆಯಾಗುವುದು, ಅನ್ನದಾನ ಮತ್ತು ಅಕ್ಷರದಾನದಂತಹ ಚತುರ್ವಿಧ ದಾನಗಳು ಮಾನವ ಜೀವನಕ್ಕೆ ವಿಶೇಷ ಮೌಲ್ಯವನ್ನು ತಂದುಕೊಡುತ್ತವೆ. ಇತರರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಅವು ಧಾರ್ಮಿಕ ನಂಬಿಕೆ, ಸಂಸ್ಕೃತಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಕೇಂದ್ರಗಳಾಗಿವೆ. ಪ್ರತಿಯೊಂದು ಗ್ರಾಮದಲ್ಲೂ ದೇವತಾರಾಧನೆಗೆ ಆದ್ಯತೆ ನೀಡುವುದರ ಜೊತೆಗೆ ದೇವಾಲಯಗಳ ಜೀರ್ಣೋದ್ಧಾರ, ಧಾರ್ಮಿಕ ಆಚರಣೆಗಳು, ದಾನ-ಧರ್ಮ ಹಾಗೂ ಸಮಾಜಮುಖಿ ಸತ್ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರಬೇಕು. ಇಂತಹ ಕಾರ್ಯಗಳು ಮನುಷ್ಯನಲ್ಲಿ ಆತ್ಮವಿಶ್ವಾಸ, ಮಾನವೀಯತೆ ಮತ್ತು ಪರೋಪಕಾರದ ಗುಣಗಳನ್ನು ಬೆಳೆಸುತ್ತವೆ. ಧರ್ಮ ಮತ್ತು ದೈವದ ಮೇಲಿನ ನಂಬಿಕೆ ಬದುಕಿನಲ್ಲಿ ಮತ್ತಷ್ಟು ಸದೃಢತೆಯನ್ನು ನೀಡುತ್ತದೆ ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ದೇವಾಲಯದ ಅಭಿವೃದ್ಧಿ ಸಮಿತಿಯ ದೊಡ್ಡಲಿಂಗಪ್ಪ, ಚನ್ನಲಿಂಗಪ್ಪ, ಈಶ್ವರಪ್ಪ, ಚಂದ್ರಶೇಖರ್, ಜಯಣ್ಣ, ಶಿವಣ್ಣ, ಶ್ರೀನಿವಾಸ್, ರಾಮಚಂದ್ರಪ್ಪ ಸೇರಿದಂತೆ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
