ರಾಜ್ಯ ಸರ್ಕಾರಿ ನೌಕರರು ಮತ್ತು ಸಾರ್ವಜನಿಕರ ಗಮನಕ್ಕೆ: ಕರ್ನಾಟಕ ಸರ್ಕಾರ 2027ನೇ ಸಾಲಿನ ಸಾರ್ವತ್ರಿಕ ರಜೆಗಳು ಹಾಗೂ ಸರ್ಕಾರಿ ನೌಕರರ ಪರಿಮಿತ ರಜೆಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ಈ ಸಂಬಂಧ ರಾಜ್ಯಪಾಲರ ಅಧಿಸೂಚನೆ ಹೊರಡಿಸಿದ್ದಾರೆ.ಅಧಿಸೂಚನೆಯ ಪ್ರಕಾರ, 2027ನೇ ಸಾಲಿನಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳ ಜೊತೆಗೆ ಒಟ್ಟು 18 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ. ಸರ್ಕಾರಿ ನೌಕರರಿಗೆ 19 ಪರಿಮಿತ ರಜೆಗಳನ್ನೂ ಮಂಜೂರು ಮಾಡಲಾಗಿದೆ.
2027ರ ಸಾರ್ವತ್ರಿಕ ರಜೆಗಳ ಪಟ್ಟಿ
ಜನವರಿ 15ರಂದು ಮಕರ ಸಂಕ್ರಾಂತಿ, ಜನವರಿ 26ರಂದು ಗಣರಾಜ್ಯೋತ್ಸವ, ಮಾರ್ಚ್ 6ರಂದು ಮಹಾಶಿವರಾತ್ರಿ, ಮಾರ್ಚ್ 10ರಂದು ಖುತುಬ್-ಎ-ರಂಜಾನ್, ಮಾರ್ಚ್ 26ರಂದು ಗುಡ್ ಫ್ರೈಡೆ, ಏಪ್ರಿಲ್ 7ರಂದು ಯುಗಾದಿ, ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಮೇ 1ರಂದು ಕಾರ್ಮಿಕ ದಿನಾಚರಣೆ ಹಾಗೂ ಮೇ 17ರಂದು ಬಕ್ರೀದ್ ಅಂಗವಾಗಿ ಸರ್ಕಾರಿ ರಜೆ ಇರಲಿದೆ.ಇನ್ನು ಜೂನ್ 16ರಂದು ಮೊಹರಂ, ಸೆಪ್ಟೆಂಬರ್ 4ರಂದು ವರಸಿದ್ಧಿ ವಿನಾಯಕ ವ್ರತ, ಸೆಪ್ಟೆಂಬರ್ 29ರಂದು ಮಹಾಲಯ ಅಮಾವಾಸ್ಯೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿ, ಅಕ್ಟೋಬರ್ 15ರಂದು ವಾಲ್ಮೀಕಿ ಜಯಂತಿ, ಅಕ್ಟೋಬರ್ 28ರಂದು ನರಕ ಚತುರ್ದಶಿ, ಅಕ್ಟೋಬರ್ 30ರಂದು ದೀಪಾವಳಿ, ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಹಾಗೂ ನವೆಂಬರ್ 16ರಂದು ಕನಕದಾಸ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಈ ಪಟ್ಟಿಯಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಪ್ರತ್ಯೇಕವಾಗಿ ಸೇರಿಸಿಲ್ಲ. ಮಹಾವೀರ ಜಯಂತಿ (ಏಪ್ರಿಲ್ 18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್ ಮಿಲಾದ್ (ಆಗಸ್ಟ್ 15), ವಿಜಯದಶಮಿ (ಅಕ್ಟೋಬರ್ 10) ಹಾಗೂ ಕ್ರಿಸ್ ಮಸ್ (ಡಿಸೆಂಬರ್ 25) ವಾರಾಂತ್ಯದ ದಿನಗಳಲ್ಲಿ ಬರುವುದರಿಂದ ಸಾರ್ವತ್ರಿಕ ರಜೆಗಳ ಪಟ್ಟಿಗೆ ಸೇರಿಸಲಾಗಿಲ್ಲ.
ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ, ಅಕ್ಟೋಬರ್ 18ರಂದು ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 13ರಂದು ಹುತ್ತರಿ ಹಬ್ಬದ ಪ್ರಯುಕ್ತ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಇನ್ನು ಏಪ್ರಿಲ್ 1ರಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾಗಿರುವುದರಿಂದ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
2027ರ ಪರಿಮಿತ ರಜೆಗಳ ಪಟ್ಟಿ
ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದು ವರ್ಷದಲ್ಲಿ ಗರಿಷ್ಠ ಎರಡು ಪರಿಮಿತ ರಜೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ. 2027ನೇ ಸಾಲಿನ ಪರಿಮಿತ ರಜೆಗಳ ಪಟ್ಟಿಯಲ್ಲಿ ಜನವರಿ 1ರಂದು ಹೊಸ ವರ್ಷ, ಫೆಬ್ರವರಿ 15ರಂದು ಮಧ್ವ ನವಮಿ, ಮಾರ್ಚ್ 5ರಂದು ಜುಮಾತ್-ಉಲ್-ವಿದ್, ಏಪ್ರಿಲ್ 15ರಂದು ಶ್ರೀರಾಮನವಮಿ, ಮೇ 10ರಂದು ರಾಮಾನುಜಾಚಾರ್ಯ ಜಯಂತಿ ಹಾಗೂ ಮೇ 11ರಂದು ಶಂಕರಾಚಾರ್ಯ ಜಯಂತಿ ಸೇರಿವೆ.
ಮೇ 20ರಂದು ಬುದ್ಧ ಪೂರ್ಣಿಮಾ, ಆಗಸ್ಟ್ 13ರಂದು ವರಮಹಾಲಕ್ಷ್ಮಿ ವ್ರತ, ಆಗಸ್ಟ್ 16ರಂದು ಋಗ್ ಉಪಾಕರ್ಮ, ಆಗಸ್ಟ್ 17ರಂದು ಯಜುರ್ ಉಪಾಕರ್ಮ, ಆಗಸ್ಟ್ 24ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 3ರಂದು ಸ್ವರ್ಣಗೌರಿ ವ್ರತ, ಸೆಪ್ಟೆಂಬರ್ 8ರಂದು ಕನ್ಯಾ ಮರಿಯಮ್ಮ ಜಯಂತಿ, ಸೆಪ್ಟೆಂಬರ್ 14ರಂದು ಅನಂತಪದ್ಮನಾಭ ವ್ರತ, ಸೆಪ್ಟೆಂಬರ್ 15ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ ಪರಿಮಿತ ರಜೆಗಳಾಗಿವೆ.
ಅಕ್ಟೋಬರ್ 18ರಂದು ತುಲಾ ಸಂಕ್ರಮಣ, ಡಿಸೆಂಬರ್ 13ರಂದು ಹುತ್ತರಿ ಹಬ್ಬ ಹಾಗೂ ಡಿಸೆಂಬರ್ 24ರಂದು ಕ್ರಿಸ್ ಮಸ್ ಈವ್ ಪ್ರಯುಕ್ತ ಪರಿಮಿತ ರಜೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
