ಬೆಂಗಳೂರು: ಈ ವರ್ಷಗಳಿಂದ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಕೂಗಿ ಹಾಜರಾತಿ ಪಡೆಯುವ ಬದಲು ಶಿಕ್ಷಕರು ಮೊಬೈಲ್ ನಲ್ಲಿ ವಿದ್ಯಾರ್ಥಿಗಳ ಮುಖ ಸ್ಕ್ಯಾನ್ ಮಾಡುವ ಮೂಲಕ ಹಾಜರಾತಿ ದಾಖಲಿಸಿಕೊಳ್ಳಲಿದ್ದಾರೆ.
‘ನಿರಂತರ’ ಯೋಜನೆಯಡಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಸೇರಿ 52,686 ಶಾಲೆಗಳ 52 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಹಾಜರಾತಿಯನ್ನು ಕೃತಕ ಬುದ್ಧಿಮತ್ತೆ ಚಾಲಿತ, ಮುಖ ಚಹರೆ ಗುರುತು ಆಧಾರಿತವಾಗಿ (ಎಐ ಫೇಶಿಯಲ್ ರಿಕಗ್ನಿಷನ್) ತೆಗೆದುಕೊಳ್ಳಲಾಗುತ್ತದೆ.
ಸುಮಾರು 5 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ (ಕೆಎಸ್ಡಿಸಿ) ಮೂಲಕ ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ಸಾಫ್ಟ್ ವೇರ್ ಕೂಡ ಸಿದ್ಧಪಡಿಸಲಾಗುತ್ತಿದೆ. ಇದು ಗರಿಷ್ಠ ಗೌಪ್ಯತೆ ಮತ್ತು ಸುರಕ್ಷತೆ ಕಾಪಾಡುತ್ತದೆ. ಪ್ರಸಕ್ತ ವರ್ಷದಿಂದಲೇ ಇ–ಹಾಜರಾತಿ ಜಾರಿಗೆ ಬರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ, ನಕಲಿ ದಾಖಲಾತಿ ತೋರಿಸಿ ಸರ್ಕಾರದ ವಿವಿಧ ಸೌಲಭ್ಯ ಪಡೆಯುತ್ತಿರುವ ಶಾಲೆಗಳ ಕಳ್ಳಾಟಕ್ಕೆ ತಡೆ ಹಾಕಲು ಮುಂದಾಗಿರುವ ಶಿಕ್ಷಣ ಇಲಾಖೆ, ‘ಇ-–ಹಾಜರಾತಿ’ ಕಡ್ಡಾಯದತ್ತ ಹೆಜ್ಜೆ ಇಟ್ಟಿದೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರಿ ಹಾಗೂ ಸರ್ಕಾರದ ಅನುದಾನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ‘ಇ–ಹಾಜರಾತಿ’ ಕಡ್ಡಾಯಗೊಳಿಸುವ ಆದೇಶವನ್ನೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW