ಸರಗೂರು: ತಾಲೂಕಿನ ತುಂಬಸೋಗೆ ಗ್ರಾಮದ ಬಳಿ ಕಪಿಲ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕರು, ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕಮಾದು ತಿಳಿಸಿದರು.
ಸಮೀಪದ ತುಂಬಸೋಗೆ ಗ್ರಾಮದಲ್ಲಿ ಮಂಗಳವಾರದಂದು 35 ಲಕ್ಷ ರೂ. ವೆಚ್ಚದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಬಿನಿ ಜಲಾಶಯ ನಿರ್ಮಾಣದ ವೇಳೆ ನಿರ್ಮಿಸಲಾದ ಸೇತುವೆ ತುಂಬಾ ಹಳೆಯದಾಗಿದ್ದು, ಶಿಥಿಲಗೊಂಡಿದೆ. ಹೀಗಾಗಿ ನೂತನವಾಗಿ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ 30 ಕೋಟಿ ರೂ.ಅನುದಾನ ದೊರಕಿದ್ದು, ಎರಡು ಬಸ್ ಹೋಗುವಂತೆ ಸೇತುವೆ ಅಗಲೀಕರಣ ಮಾಡಲಾಗುವುದು. ಇದಲ್ಲದೆ ಸರಗೂರು ಹ್ಯಾಂಡ್ ಪೋಸ್ಟ್ ರಸ್ತೆಯನ್ನು ದ್ವಿಪಥ ರಸ್ತೆ ಮಾಡಲು ಸರಕಾರ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದರು.
ಹೈಟೆಕ್ ಭವನ: ಮೈಸೂರಿನಲ್ಲಿ ನಿರ್ಮಾಣಗೊಂಡಿರುವ ವಾಲ್ಮೀಕಿ ಭವನ ಮಾದರಿಯಲ್ಲಿಯೇ ಗ್ರಾಮದಲ್ಲಿ ಭವನ ನಿರ್ಮಾಣಗೊಳ್ಳಬೇಕು. ಶುಭ, ಸಮಾರಂಭಗಳು ನಡೆಯುವಂತೆ ನೋಡಿಕೊಳ್ಳ ಬೇಕು. ಇದಕ್ಕಾಗಿ ಸುರಕ್ಷಿತ ಭವನ ನಿರ್ಮಾಣ ಮಾಡಬೇಕು. ಕೋಟೆ ವಾಲ್ಮೀಕಿ ಭವನಕ್ಕೆ 2 ಕೋಟಿ ರೂ.ಅನುದಾನ ತರಲಾಗಿದೆ. ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಗ್ರಾಮದಲ್ಲಿ ಭವನ ನಿರ್ಮಾಣಕ್ಕೆ 1 ಕೋಟಿ ರೂ.ಅನುದಾನ ಕೇಳಿದ್ದೀರಿ. ಸದ್ಯ ಮುಖ್ಯಮಂತ್ರಿಗಳ ಅನುದಾನ 20 ಲಕ್ಷ ರೂ., ಸಂಸದರ ಅನುದಾನ 10 ಲಕ್ಷ ರೂ., ಶಾಸಕರ ಅನುದಾನ 5 ಲಕ್ಷ ರೂ. ಒಟ್ಟಾರೆ 35 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಗ್ರಾಮಸ್ಥರು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಇದಲ್ಲದೆ ಬಸ್ ನಿಲ್ದಾಣಕ್ಕೆ 6 ಲಕ್ಷ ರೂ., ಅಂಬೇಡ್ಕರ್ ಭವನ ಕಾಮಗಾರಿ ಪೂರ್ಣಗೊಳಿಸಲು ಅನುದಾನ ನೀಡಲಾಗುವುದು ಎಂದರು.
ಟಿಎಸ್ಪಿ, ಎಸ್ ಸಿ ಪಿ ಯೋಜನೆಯಡಿ:
ಗ್ರಾಮದ ರಸ್ತೆಗಳನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು. ತುಂಬಸೋಗೆ ನಿಲುವಾಗಿಲು ರಸ್ತೆ ಅಭಿವೃದ್ಧಿ ಗೆ ಕ್ರಮ ವಹಿಸಲಾಗುವುದು. ಹೆಬ್ಬಲಗುಪ್ಪೆ, ಇಟ್ನ ಗ್ರಾಮಗಳ ಸಂಪರ್ಕದ ಜಮೀನಿನ ರಸ್ತೆ ಯನ್ನು ಮೆಟ್ಲಿಂಗ್ ಮಾಡಿಸಿಕೊಡಲಾಗುವುದು. ಹಂತ, ಹಂತವಾಗಿ ಗ್ರಾಮದ ಅಭಿವೃದ್ಧಿ ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಕಾಂಗ್ರೆಸ್ ಹಿರಿಯ ಮುಖಂಡ ಬಿ.ಪಿ.ಬಸಪ್ಪ ಮಾತನಾಡಿ, ತುಂಬಸೋಗೆ–ಹೆಬ್ಬಲಗುಪ್ಪೆ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ದಿ ಪಡಿಸಬೇಕು. ಗ್ರಾಮದಲ್ಲಿ ಎಲ್ಲ ಜನಾಂಗದವರಿಗೂ ಸ್ಮಶಾನ ಜಾಗದ ಸಮಸ್ಯೆಯಾಗಿದ್ದು, ಸ್ಮಶಾನ ನೀಡಬೇಕು. ಗ್ರಾಮಕ್ಕೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿರುವುದು ತುಂಬಾ ಸಂತಸ. ಜಾಗದ ಕೊರತೆ ಇದೆ. ನಿಲುವಾಗಿಲು–ತುಂಬಸೋಗೆ ರಸ್ತೆ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.
ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನ ರಾಜಣ್ಣ ಮಾತನಾಡಿದರು. ತುಂಬಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಸದಸ್ಯರಾದ ನಾಗೇಂದ್ರ, ಚೆನ್ನನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಾಮರಾಜು, ಕಾಂಗ್ರೆಸ್ ಮುಖಂಡರಾದ ಬಿ.ಸಿ.ಬಸಪ್ಪ, ಶಂಭುಲಿಂಗನಾಯಕ, ಜಿನ್ನಹಳ್ಳಿ ರಾಜನಾಯಕ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ನಂಜಪ್ಪ, ತಾಪಂ ಮಾಜಿ ಸದಸ್ಯ ಅಂಕಪ್ಪ, ಬಿದರಹಳ್ಳಿ ರಾಜು, ಪ್ರಕಾಶ್, ಜಕ್ಕಹಳ್ಳಿ ಮಲ್ಲೇಶ್, ಸಿದ್ದನಾಯಕ ಬಾಚೇಗೌಡನಹಳ್ಳಿ, ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನರಾಜಣ್ಣ, ತುಂಬಸೋಗೆ ನಾಗಣ್ಣ, ಹಳೆಯೂರು ಚಿನ್ನಯ್ಯ, ಶಿವಲಿಂಗು, ಸೋಮಣ್ಣ, ನಿರ್ಮಿತಿ ಕೇಂದ್ರದ ಸುಪ್ರೀತ್, ವಸಂತ್, ಅಶೋಕ್, ಶಿವಕುಮಾರ್, ಆಪ್ತ ಸಹಾಯಕರಾದ ಮಂಜುನಾಥ್, ಸುದರ್ಶನ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


