ಬಿಹಾರ: ಮನೆಯೊಂದರ ಮುಂದೆ ನಿಲ್ಲಿಸಿದ್ದ ಆಲ್ಟೋ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನೊಳಗೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ಸುಟ್ಟುಕರಕಲಾಗಿದ್ದಾರೆ. ಮನೆಯ ಉಳಿದ ಸದಸ್ಯರು ಮನೆಯೊಳಗಿದ್ದ ವೇಳೆ, ಮಕ್ಕಳಿಬ್ಬರು ಕಾರಿನೊಳಗೆ ಆಟವಾಡಲು ಬಂದಿರುವುದಾಗಿ ತಿಳಿದು ಬಂದಿದೆ.
ಇದ್ದಕ್ಕಿದ್ದಂತೆ ಕಾರಿನಿಂದ ಹೊಗೆ ಬರಲಾರಂಭಿಸಿದ್ದು, ಮನೆಯವರು ಹೊರಗೆ ಧಾವಿಸಿದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡು ಬಂದಿದೆ. ಏಕಾಏಕಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮನೆಯವರು ಮಕ್ಕಳಿಬ್ಬರನ್ನು ಕಾರಿನಿಂದ ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಕಾರಿನ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಮಕ್ಕಳಿಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.
ಕೆಲ ಹೊತ್ತಿನ ಬಳಿಕ ಕಾರಿನ ಗಾಜು ಒಡೆದು ಮಕ್ಕಳನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಬೆಂಕಿ ನಂದಿಸಿ ಕಾರಿನಲ್ಲಿದ್ದ ಮಕ್ಕಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದರೂ ಸಹ ಅಷ್ಟೊತ್ತಿಗಾಗಲೇ ಮಕ್ಕಳಿಬ್ಬರ ದೇಹ ಅರೆಬರೆ ಸುಟ್ಟು ಹೋಗಿದೆ. ಪರಿಣಾಮ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಕೂಡ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿರುವುದು ವರದಿಯಾಗಿದೆ.


