ಬೆಂಗಳೂರು: ತಾವು ಮಲಗುತ್ತಿದ್ದ ಜಾಗದಲ್ಲಿ ಮಲಗಿದ್ದ ಎಂಬ ಒಂದೇ ಕಾರಣಕ್ಕೆ ಅಪರಿಚಿತ ವ್ಯಕ್ತಿಯ ಮೇಲೆ ಕಾಲಿನಿಂದ ಒದ್ದು ಹತ್ಯೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸೈಯದ್ ಕಮ್ರಾನ್ ಮತ್ತು ವಿಶಾಲ್ ಅಹಿವದಾಸ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಬ್ಬರು ಕೌಟುಂಬಿಕ ಕಲಹದಿಂದ ಮನೆಯಿಂದ ಹೊರಬಂದಿದ್ದರು. ಮನೆಯಿಂದ ಹೊರಬಿದ್ದ ಬಳಿಕ ಇಬ್ಬರೂ ಆರ್.ಟಿ. ನಗರ ಹೆಬ್ಬಾಳ ಸೇರಿದಂತೆ ವಿವಿಧೆಡೆ ಸುತ್ತಾಡಿ ಬೆಳಿಗ್ಗೆ ಸಿಕ್ಕ ಕೆಲಸ ಮಾಡಿಕೊಂಡು ಬಂದ ಹಣದಲ್ಲಿ ಮದ್ಯ ಸೇವಿಸಿ ಆರ್.ಟಿ. ನಗರದ ಕೃಷ್ಣಪ್ಪ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ಮಲಗಿಕೊಂಡು ಜೀವನ ಮಾಡುತ್ತಿದ್ದರು ಎನ್ನಲಾಗಿದೆ.
ಡಿ.11ರಂದು ರಾತ್ರಿ ಇಬ್ಬರು ಮದ್ಯ ಸೇವಿಸಿಕೊಂಡು ಮಲಗಲು ನೆಲಮಹಡಿಗೆ ಬಂದಾಗ ಅಷ್ಟರಲ್ಲಾಗಲೇ ಆ ಜಾಗದಲ್ಲಿ ಅಪರಿಚಿತ ವ್ಯಕ್ತಿ ಮಲಗಿರುವುದು ಕಂಡು ಬಂದಿದೆ. ಈ ವೇಳೆ ಇಬ್ಬರೂ ಆರೋಪಿಗಳು ಆ ಅಪರಿಚಿತನ ಜೊತೆ ಜಗಳಕ್ಕೆ ಹೋಗಿ ಸಿಟ್ಟಿನಲ್ಲಿ ವ್ಯಕ್ತಿಯ ಎದೆ ಹಾಗೂ ಮುಖದ ಮೇಲೆ ಮನಸೋಇಚ್ಛೆ ಒದ್ದು ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಮಾರನೇ ದಿನ ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಹತ್ಯೆಯಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎನ್ನಲಾಗಿದೆ. ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.


