ಮಹಾರಾಷ್ಟ್ರ: ಅಣ್ಣ, ತಂಗಿ ತಪ್ಪು ದಾರಿ ತುಳಿದರೂ ಬುದ್ಧಿ ಹೇಳೊ ಬದಲು ಆತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಕೆಯ ತಪ್ಪಿಗೆ ರಕ್ಷಕನಾಗಿ ಖತರ್ನಾಕ್ ಪ್ಲಾನ್ ಮಾಡಿ ಸಿಕ್ಕಿಬಿದ್ದಿದ್ದಾನೆ.
ತನ್ನ ಸಹೋದರಿಗೆ 12ನೇ ತರಗತಿ ಪರೀಕ್ಷೆಯಲ್ಲಿ ನಕಲು ಮಾಡಲು ನೆರವಾಗುವ ನಿಟ್ಟಿನಲ್ಲಿ, ವ್ಯಕ್ತಿಯೊಬ್ಬ ಪೊಲೀಸ್ ಸಮವಸ್ತ್ರ ಧರಿಸಿ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಕಾರ್ಯವನ್ನು ನಿರ್ವಹಿಸುವಂತೆ ನಟಿಸಿ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ. ಅನುಪಮ್ ಮದನ್ ಖಂಡಾರೆ(24) ಎಂಬಾತ ಪೊಲೀಸ್ ಕೈಗೆ ಸಿಕ್ಕಿಬಿದ್ದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಪಾತೂರು ಪಟ್ಟಣದ ಶಹಬಾಬು ಉರ್ದು ಪ್ರೌಢಶಾಲೆಯಲ್ಲಿ 12ನೇ ತರಗತಿಯ ಮೊದಲ ಪರೀಕ್ಷೆಯ ವೇಳೆ ಈ ಘಟನೆ ನಡೆದಿದೆ. ಪಾಂಗ್ರಾ ಬಂಡಿಯಿಂದ ಬಂದ ಖಂಡಾರೆ, ತನ್ನ ತಂಗಿಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ನೆರವಾಗುವ ನಿಟ್ಟಿನಲ್ಲಿ ನಿಜವಾದ ಪೊಲೀಸ್ ಧಿರಿಸಿನಲ್ಲಿ ಶಾಲೆಗೆ ಬಂದಿದ್ದಾನೆ. ಪರೀಕ್ಷಾ ಕೇಂದ್ರದ ಭದ್ರತೆಗೆ ನಿಂತು ಅಲ್ಲಿಂದ ಉತ್ತರ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಯೋಜನೆಯನ್ನು ಅನುಪಮ್ ಹಾಕಿಕೊಂಡಿದ್ದ ಎನ್ನಲಾಗಿದೆ.
ಇದೇ ವೇಳೆ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಕಿಶೋರ್ ಶೆಲ್ಕೆ ಮತ್ತು ಅವರ ತಂಡವು ಆಗಮಿಸಿ ಭದ್ರತೆಯನ್ನು ಕಾಯ್ದುಕೊಂಡಿತು. ನಿಜವಾದ ಪೊಲೀಸ್ ಬಂದಾಗ ಅನುಪಮ್ ಸೆಲ್ಯೂಟ್ ನೀಡಿದ್ದಾನೆ. ಸೆಲ್ಯೂಟ್ ನೀಡಿದ ವಿಧಾನದಿಂದಲೇ ಆತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.
ಅನುಪಮ್ ಮಾಡಿದ ಸೆಲ್ಯೂಟ್ ಪ್ರೋಟೋಕಾಲ್ ಗೆ ಅನುಗುಣವಾಗಿಲ್ಲ ಮತ್ತು ಅವರ ಸಮವಸ್ತ್ರದ ಮೇಲಿನ ನಾಮಫಲಕ ತಪ್ಪಾಗಿತ್ತು. ಈ ಕಾರಣದಿಂದ ಅಧಿಕಾರಿಗಳಿಗೆ ಅನುಪಮ್ ಮೇಲೆ ಅನುಮಾನ ಮೂಡಿದೆ ಎನ್ನಲಾಗಿದೆ. ಪೊಲೀಸರು ಕೂಲಂಕಷ ತನಿಖೆಯ ನಂತರ, ಆತನ ಜೇಬಿನಲ್ಲಿ ಇಂಗ್ಲಿಷ್ ಪರೀಕ್ಷಾ ಪತ್ರಿಕೆಯ ಪ್ರತಿಯನ್ನು ಪತ್ತೆಹಚ್ಚಿದ್ದಾರೆ. ಈ ವೇಳೆ ವ್ಯಕ್ತಿಯ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಖಂಡಾರೆಯನ್ನು ಬಂಧಿಸಿ ಅವರ ವಿರುದ್ಧ 1982ರ ಕಾಯ್ದೆಯ ಸೆಕ್ಷನ್ 417, 419, 170, 171 ಮತ್ತು ಸೆಕ್ಷನ್ 7 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


