ಖಡಕ್ ಪೊಲೀಸ್ ಅಧಿಕಾರಿಯೆಂದೇ ಕರ್ನಾಟಕದಾದ್ಯಂತ ಜನಪ್ರಿಯರಾಗಿದ್ದ ಕೆ. ಅಣ್ಣಾಮಲೈ ಈಗ ರಾಜಕೀಯರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಆಗಿ ಕೊನೆಯದಾಗಿ ಸೇವೆ ಸಲ್ಲಿಸಿದ್ದ ಅವರು 4 ವರ್ಷಗಳ ಹಿಂದೆ ರಾಜೀನಾಮೆ ನೀಡಿದ್ದರು. ಇದೀಗ ಅಣ್ಣಾಮಲೈ ಬಯೋಪಿಕ್ ವಿಚಾರ ಚರ್ಚೆಗೆ ಬಂದಿದೆ. ಕೆ ಅಣ್ಣಾಮಲೈ ರಾಜೀನಾಮೆ ವಿಚಾರ ಭಾರೀ ಅಚ್ಚರಿಗೆ ಕಾರಣವಾಗಿತ್ತು. ರಾಜಕೀಯರಂಗ ಸೇರಲು ಅವರು ಈ ನಿರ್ಧಾರ ಕೈಗೊಂಡಿದ್ದಾಗ ಆಗ ಸುದ್ದಿಯಾಗಿತ್ತು. ಬಳಿಕ ಅದು ನಿಜವೂ ಆಗಿತ್ತು.
ಸದ್ಯ ತಮಿಳುನಾಡಿನ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯ ಕಣದಲ್ಲಿದ್ದಾರೆ. 9 ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಖಡಕ್ ಕಾರ್ಯವೈಖರಿಯಿಂದ ಅಣ್ಣಾಮಲೈ ಕರ್ನಾಟಕ ಪೊಲೀಸ್‌ನ ಸಿಂಗಂ ಎಂದೇ ಖ್ಯಾತರಾಗಿದ್ದರು. 1984ರ ಜೂ.4ರಂದು ಹುಟ್ಟಿದ ಅಣ್ಣಾಮಲೈ ಮೂಲತಃ ತಮಿಳುನಾಡಿನ ಕೊಯಮತ್ತೂರಿನವರು. ಬಿಇ ಎಂಜಿನಿಯರಿಂಗ್ ಮಾಡಿ ಎಂಬಿಎ ಪೂರ್ಣಗೊಳಿಸಿದ ಅಣ್ಣಾಮಲೈ 2011ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿದ್ದರು. ಕಾರ್ಕಳ ಉಪವಿಭಾಗದ ಎಎಸ್ಪಿಯಾಗಿ 2011ರಲ್ಲಿ ವೃತ್ತಿ ಆರಂಭಿಸಿ ಅಣ್ಣಾಮಲೈ 2013ರಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು.
ಬಳಿಕ ಅಲ್ಲಿಂದ ಚಿಕ್ಕಮಗಳೂರು ಎಸ್ಪಿಯಾಗಿ ತಮ್ಮ ಖಡಕ್ ನಿರ್ಧಾರಗಳಿಂದ ಸದ್ದು ಮಾಡಿದ್ದರು. ತಮ್ಮ ದಕ್ಷ ಹಾಗೂ ಪ್ರಾಮಾಣಿಕ ಕಾರ್ಯವೈಖರಿಯಿಂದ ಜಿಲ್ಲೆಯಲ್ಲಿ ಖಡಕ್ ಅಧಿಕಾರಿಯಾಗಿ ಗುರ್ತಿಸಿಕೊಂಡಿದ್ದರು. ಅಲ್ಲಿನ ಜನರ ಪಾಲಿಗೆ ‘ಸಿಂಗಂ’ ಆಗಿದ್ದರು. ಬಳಿಕ ಅಣ್ಣಾಮಲೈ ಅವರನ್ನು ಬೆಂಗಳೂರಿಗೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿತ್ತು. 2018ರ ಅಕ್ಟೋಬರ್ 17ರಿಂದ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕಾರ್ಯ ನಿರ್ವಹಿಸಿದರು. ಸದ್ಯ ಅಣ್ಣಾಮಲೈ ಕುರಿತು ತಮಿಳಿನಲ್ಲಿ ಬಯೋಪಿಕ್ ಸಿನಿಮಾ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ತಮಿಳು ನಟ ವಿಶಾಲ್, ತೆರೆ ಮೇಲೆ ಅಣ್ಣಾಮಲೈ ಆಗಿ ನಟಿಸುತ್ತಾರೆ ಎನ್ನಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296