ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಯಿಂದ ಮತ್ತೋರ್ವ ರೈತ ಪ್ರಾಣ ಕಳೆದುಕೊಂಡಿದ್ದಾನೆ. ರೈತ ಬಾಲಾಜಿ ನಾಯಕ್ (42) ಹುಲಿ ದಾಳಿಗೆ ಬಲಿಯಾಗಿದ್ದು ಹುಲಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ನಿನ್ನೆ ದನ ಮೇಯಿಸುವಾಗ ಹುಲಿ ದನಗಳ ಮೇಲೆ ದಾಳಿ ಮಾಡಿತ್ತು. ಆಗ ದನಗಳು ಹುಲಿಗೆ ಸಿಗದೆ ಚೆಲ್ಲಾ ಪಿಲ್ಲಿಯಾಗಿ ಓಡಿದವು. ದನಗಳು ಸಿಗದ ಹಿನ್ನೆಲೆ ಬಾಲಾಜಿ ಮೇಲೆ ಹುಲಿ ದಾಳಿ ನಡೆಸಿತ್ತು. ಬಳಿಕ ಮೃತದೇಹ ಕಾಡಿಗೆ ಎಳೆದುಕೊಂಡು ಹೋಗಿತ್ತು. ಇದನ್ನು ಗಮನಿಸಿದ ಅಕ್ಕ ಪಕ್ಕದ ಜಮೀನಿನವರು ಕೂಗಾಡಿದ್ದು ಶಬ್ದ ಕೇಳಿ ಮೃತದೇಹ ಬಿಟ್ಟು ಹುಲಿ ಓಡಿ ಹೋಗಿತ್ತು.
ಹುಲಿಯು ರೈತನ ಒಂದು ಕಾಲು, ದೇಹದ ಕೆಲ ಭಾಗ ತಿಂದು ಹಾಕಿದೆ. ಮತ್ತೆ ಅದೇ ಸ್ಥಳಕ್ಕೆ ಹುಲಿ ಬರುವ ಸಾಧ್ಯತೆ ಹಿನ್ನೆಲೆ ಅರಣ್ಯ ಇಲಾಖೆ ಅಲರ್ಟ್ ಆಗಿದೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದೆ.


