ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ವ್ಯಕ್ತಿಯನ್ನು ಪ್ಲಾಸ್ಕ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆ ಮಾಡಿ ಬಳಿಕ ಶವವನ್ನು ಸ್ಥಳಾಂತರ ಮಾಡಲು ಹೋಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಸೀಗೆಹಳ್ಳಿ ನಿವಾಸಿ ತೇಜೇಶ್ವರ್ ಕೊಲೆಯಾದ ವ್ಯಕ್ತಿ. ಆರೋಪಿ ಧರ್ಮೇಂದ್ರ ಸಿಂಗ್ನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮದ್ಯ ವ್ಯಸನಿಯಾಗಿದ್ದ. ಬೆಳಿಗ್ಗೆಯೇ ಮದ್ಯ ಸೇವಿಸಿ ಕೆಲಸಕ್ಕೆ ತೆರಳುತ್ತಿದ್ದ. ಇದರಿಂದ ತೇಜೇಶ್ವರ್ ನನ್ನು ಹೋಟೆಲ್ನ ಸೆಕ್ಯೂರಿಟಿ ಕೆಲಸದಿಂದ ತೆಗೆದುಹಾಕಲಾಗಿತ್ತು. ಇಬ್ಬರು ನೇಪಾಳ ಮೂಲದವರಾಗಿದ್ದಾರೆ.
ಬುಧವಾರ ಬೆಳಿಗ್ಗೆ ಆರೋಪಿ ಸೇರಿದಂತೆ ನಾಲ್ವರು ಬಾರ್ ವೊಂದಕ್ಕೆ ತೆರಳಿ ಮದ್ಯ ಸೇವಿಸಿದ್ದರು. ಮಧ್ಯಾಹ್ನದ ಬಳಿಕ ಕೊಲೆಯಾದ ವ್ಯಕ್ತಿ ಹಾಗೂ ಆರೋಪಿ ಮನೆಯೊಂದರಲ್ಲಿ ಪಾರ್ಟಿ ನಡೆಸುತ್ತಿದ್ದರು. ಆಗ ಪುತ್ರಿಯ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ ಎಂದು ಆರೋಪಿಸಿ, ತೇಜೇಶ್ವರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.


