ಜಮ್ಮು ಮತ್ತು ಕಾಶ್ಮೀರದಲ್ಲಿ ಒಳನುಸುಳುವಿಕೆ ಯತ್ನವನ್ನು ಸೇನೆ ವಿಫಲಗೊಳಿಸಿದೆ. ಅಖ್ನೂರ್ ಸೆಕ್ಟರ್ ಮೂಲಕ ನುಸುಳಲು ಯತ್ನಿಸಿದ ನಾಲ್ವರು ಭಯೋತ್ಪಾದಕರ ಪೈಕಿ ಒಬ್ಬರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ.
ಇಂದು ಮುಂಜಾನೆ ಕಣ್ಗಾವಲು ವ್ಯವಸ್ಥೆಗಳ ಸಹಾಯದಿಂದ ಭಯೋತ್ಪಾದಕರ ಉಪಸ್ಥಿತಿಯನ್ನು ಪತ್ತೆ ಮಾಡಲಾಯಿತು. ಹತ್ಯೆಗೀಡಾದ ಭಯೋತ್ಪಾದಕನ ಮೃತದೇಹದೊಂದಿಗೆ ಉಳಿದ ಮೂವರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ.
ಪೂಂಚ್ ದಾಳಿಯಲ್ಲಿ ಭಯೋತ್ಪಾದಕರ ಹುಡುಕಾಟವನ್ನು ಸೇನೆ ತೀವ್ರಗೊಳಿಸಿದೆ. ಈ ಪ್ರದೇಶದಲ್ಲಿ ವಾಯು ನಿಗಾವನ್ನು ತೀವ್ರಗೊಳಿಸಲಾಗಿದೆ. ‘ದೇರಾ ಕಿ ಗಲಿ’ ಅರಣ್ಯ ಪ್ರದೇಶದಲ್ಲಿಯೂ ಸೇನೆ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಅಲ್ಲದೆ ಸ್ನಿಫರ್ ಡಾಗ್ ಗಳನ್ನು ಕೂಡ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜೌರಿ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.


