ಚಿತ್ರದುರ್ಗ: ಆಸ್ತಿ ವಿಚಾರಕ್ಕೆ ಅಣ್ಣ ತಮ್ಮನ ನಡುವೆ ಗಲಾಟೆ ನಡೆದು ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಸಿದ್ದೇಶ್(36) ಕೊಲೆಯಾದ ವ್ಯಕ್ತಿ.
ಅವಿವಾಹಿತರಾಗಿದ್ದ ಸಿದ್ದೇಶ್ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಅವರ ಸಹೋದರ ಸತೀಶ್ ಮದುವೆಯಾಗಿ ಪತ್ನಿ, ಪುತ್ರಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಪ್ರತಿದಿನ ಕುಡಿದು ಬಂದು ಸತೀಶ್ ಮನೆಯ ಬಳಿ ಸಿದ್ದೇಶ್ ಗಲಾಟೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಆಸ್ತಿಯಲ್ಲಿ ಪಾಲು ಕೊಡುವಂತೆ ಶುಕ್ರವಾರ ರಾತ್ರಿ ಸಿದ್ದೇಶ್ ಗಲಾಟೆ ಮಾಡಿದ್ದು, ಜಗಳ ವಿಕೋಪಕ್ಕೆ ತಿರುಗಿ ದೊಣ್ಣೆಯಿಂದ ತಮ್ಮನಿಗೆ ಸತೀಶ್ ಹೊಡೆದಿದ್ದಾರೆ. ಸಿದ್ದೇಶ್ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಸ್ಥಳೀಯರು ಅವರಿಗೆ ಹೊಸದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸತೀಶ್ ನನ್ನು ಬಂಧಿಸಲಾಗಿದೆ.


