ಬೇಗುಸರಾಯ್: ಡಿ ಗ್ರೂಪ್ ಉದ್ಯೋಗಿಯೊಬ್ಬರು ರೈಲು ಎಂಜಿನ್ ಮತ್ತು ಕೋಚ್ ನಡುವೆ ಸಿಲುಕಿ ಭೀಕರವಾಗಿ ಸಾವನ್ನಪ್ಪಿದ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಸಮಸ್ತಿಪುರದ 25 ವರ್ಷದ ಅಮರ್ ಕುಮಾರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಘಟನೆಯ ಫೋಟೋ, ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದೃಶ್ಯ ಬೆಚ್ಚಿಬೀಳಿಸುವಂತಿದೆ.
ಫ್ಲಾಟ್ಫಾರ್ಮ್ 5ರಲ್ಲಿ ನಿಂತಿದ್ದ ಲಖನೌ-ಬರೌನಿ ಎಕ್ಸ್ಪ್ರೆಸ್ ರೈಲಿನ ಎಂಜಿನ್ ಮತ್ತು ಕೋಚ್ ಅನ್ನು ಜೋಡಿಸುವ ಕೆಲಸವನ್ನು ಶನಿವಾರ ಬೆಳಿಗ್ಗೆ 8:10 ರ ಸುಮಾರು ಅಮರ್ ಕುಮಾರ್ ನಿರ್ವಹಿಸುತ್ತಿದ್ದರು. ಈ ವೇಳೆ ಪ್ಲೇಟ್ಗಳ ನಡುವೆ ಸಿಲುಕಿದ ಅಮರ್ ಕುಮಾರ್, ಅಪ್ಪಚ್ಚಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರೈಲ್ವೆಯ ಸಹೋದ್ಯೋಗಿಗಳ ಯಡವಟ್ಟಿನಿಂದ ಈ ದುರಂತ ಸಂಭವಿಸಿದೆ ಎಂದು ಪೂರ್ವ ಕೇಂದ್ರ ವಲಯದ ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q