ಹೆಚ್.ಡಿ. ಕೋಟೆ: ಕೇಸರಿ ಶಾಲು ಭಾವೈಕ್ಯತೆಯ ಸಂಕೇತ ಎಂದು ಶಾಸಕ ಅನಿಲ್ಚಿಕ್ಕಮಾದು ನುಡಿದರು. ಹೆಚ್.ಡಿ. ಕೋಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪವಿರುವ ಕನಕಭವನದ ಆವರಣದಲ್ಲಿ ಹನುಮ ಸೇವಾ ಸಮಿತಿಯಿಂದ 6ನೇ ವರ್ಷದ ಹನುಮ ಜಯಂತಿ ಉತ್ಸವದ ಅಂಗವಾಗಿ ಕಾರ್ಯಕ್ರಮಕ್ಕೆ ಶಾಸಕ ಅನಿಲ್ಚಿಕ್ಕಮಾದು ಮತ್ತು ಬಿಡುಗಲು ಪಡವಲು ವಿರಕ್ತಪಠದ ಶ್ರೀಶ್ರೀ ಶ್ರೀ ಮಹದೇವಸ್ವಾಮಿಗಳು ಹಾಗೂ ಹನುಮ ಸೇವಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಹನುಮನ ಭಾವಚಿತ್ರಕ್ಕೆ ಪುಷ್ಪಾಷರ್ಚನೆ ನೆರವೇರಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಪಟ್ಟಣದಲ್ಲಿ ಹನುಮ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ಹನುಮ ಜಯಂತಿ ಉತ್ಸವವನ್ನು ಎಲ್ಲಾ ತಾಲ್ಲೂಕುಗಳಲ್ಲೂ ಆಚರಿಸಿಕೊಂಡು ಬರುತ್ತಿದ್ದಾರೆ ಅದರಂತೆ ಇಲ್ಲಿಯೂ ಸಹ ಹನುಮ ಭಕ್ತಾದಿಗಳು ಹನುಮ ಜಯಂತಿಯನ್ನು ಭಕ್ತಿ ಭಾವೈಕ್ಯತೆಯಿಂದ ಬಹಳ ಅರ್ಥಪೂರ್ಣವಾಗಿ ತಾಲ್ಲೂಕಿನಲ್ಲಿ ಆಚರಿಸುವಂತಾಗಲಿ ಎಂದು ಶುಭ ಹಾರೈಸಿದರು.
ಶ್ರೀ ರಾಮನನ್ನು ಸೃಷ್ಠಿ ಮಾಡಿದ ಶ್ರೀ ವಾಲ್ಮಿಕಿ ಮಹರ್ಷಿಯವರು ಹನುಮಲ್ಲಿರುವ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ. ಅಯೋದ್ಯೆಯಲ್ಲಿ ಶ್ರೀರಾಮನನ್ನು ಶ್ರೀ ನರೇಂದ್ರ ಮೋದಿಯವರು ಪ್ರತಿಷ್ಠಾಪನೆ ಮಾಡಿದ್ದಾರೆ. ಮೋದಿಜಿಯವರಿಗೆ ಟ್ವಿಟರ್, ಇ-ಮೇಲ್ ಮೂಲಕ ಶ್ರೀ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ನಿರ್ಮಿಸಿಕೊಡುವಂತೆ ವಯಕ್ತಿಕವಾಗಿ ನಾನು ಸಹ ಮನವಿ ಮಾಡಿಕೊಂಡಿದ್ದೆ ಅದರಂತೆ ವಾಲ್ಮೀಕಿಯವರ ಪುತ್ಥಳಿ ನಿರ್ಮಿಸಿ ಅವರ ಹೆಸರಿನಲ್ಲಿ ಅಲ್ಲಿನ ರೈಲು ನಿಲ್ದಾಣಕ್ಕೆ ಇಟ್ಟಿರುವುದು ಪ್ರಶಂಸನೀಯ ಎಂದರು.
ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳಿಂದ ಶ್ರೀ ಹನುಮನ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹನುಮನ ಜಯಂತಿ ಪ್ರಯುಕ್ತ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಅದ್ದೂರಿಯಾಗಿ ಕನಕಭವನದಿಂದ ಹೊರಟ ಮೆರವಣಿಗೆಯು ಹುಣಸೂರು ಬೇಗೂರು ರಸ್ತೆ ಮೂಲಕ ಮೆರವಣಿಗೆ ಸಾಗಿ ಹನುಮ ಘೋಷಣೆಗಳೊಂದಿಗೆ ಭಕ್ತಾದಿಗಳು ವರದರಾಜಸ್ವಾಮಿ ದೇವಸ್ಥಾನದಲ್ಲಿ ಸಮಾವೇಶಗೊಂಡಿತು ನಂತರ ಭಕ್ತಾದಿಗಳಿಗೆ ಶ್ರೀ ಹನುಮ ಸೇವಾ ಸಮಿತಿಯಿಂದ ಪ್ರಸಾದ ನೀಡಿದರು.
ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ಡೊಳ್ಳುಕುಣಿತ ವಿಶೇಷವಾಗಿ ಸಾರ್ವಜನಿಕರ ಗಮನ ಸೆಳೆದವು. ಬಿಡುಗಲು ಪಡವಲು ವಿರಕ್ತ ಮಠದ ಸ್ವಾಮೀಜಿಯವರಾದ ಶ್ರೀ ಶ್ರೀ ಶ್ರೀಮಹದೇವಸ್ವಾಮಿಗಳು ಮಾತನಾಡಿದರು
ಹಿರಿಯ ಮುಖಂಡರಾದ ಎಂ.ಸಿ. ದೊಡ್ಡನಾಯಕ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹಂಚೀಪುರ ಗುರುಸ್ವಾಮಿ, ಜೆಡಿಎಸ್ ಯುವ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ಹನುಮ ಸೇವಾ ಸಮಿತಿ ಅಧ್ಯಕ್ಷ ಡೈರಿ ಶ್ರೀಕಾಂತ್, ಹಾಗು ಸಹಸ್ರಾರು ಹನುಮ ಭಕ್ತರು ಪಾಲ್ಗೊಂಡಿದ್ದರು.
ವರದಿ: ಮಲಾರ ಮಹದೇವಸ್ವಾಮಿ


